ಭಾರತ ರತ್ನಕ್ಕೆ ತಮ್ಮನ್ನು ಆಯ್ಕೆ ಮಾಡಿದಾಗ ಪ್ರಧಾನಿಗೇ ಎಚ್ಚರಿಕೆ ಕೊಟ್ಟ ಮಹಾನುಭಾವರೊಬ್ಬರಿದ್ದಾರೆ ಎಂದರೆ ನಂಬುತ್ತೀರಾ?!


ಖ್ಯಾತ ವಿಜ್ಞಾನಿ ಸಿಎನ್‌ಆರ್ ರಾವ್ ಹಾಗೂ ಕ್ರಿಕೆಟ್‌ನ ದಂತಕಥೆ ಸಚಿನ್ ತೆಂಡೂಲ್ಕರ್ ಈ ದೇಶದ ಮೇರು ಪುರಸ್ಕಾರವಾದ ಭಾರತ ರತ್ನವನ್ನು ಅತ್ಯಂತ ಧನ್ಯತೆಯಿಂದ ಸ್ವೀಕರಿಸಿದರು. 2013 ನವೆಂಬರ್ 16ರಂದು ಈ ಪುರಸ್ಕಾರಕ್ಕೆ ತಮ್ಮನ್ನು ಆಯ್ಕೆ ಮಾಡಿದಾಗಲೂ ರಾವ್ ಹಾಗೂ ಸಚಿನ್ ಸರ್ಕಾರಕ್ಕೆ ಧನ್ಯತೆಯನ್ನು ವ್ಯಕ್ತಪಡಿಸಿದ್ದರು. ಅದರಲ್ಲಿ ತಪ್ಪೇನೂ ಇಲ್ಲ ಬಿಡಿ.

ಆದರೆ ಭಾರತ ರತ್ನಕ್ಕೆ ತಮ್ಮನ್ನು ಆಯ್ಕೆ ಮಾಡಿದಾಗ ಪ್ರಧಾನಿಗೇ ಎಚ್ಚರಿಕೆ ಕೊಟ್ಟ ಮಹಾನುಭಾವರೊಬ್ಬರಿದ್ದಾರೆ ಎಂದರೆ ನಂಬುತ್ತೀರಾ?!
ಈ ಪುರಸ್ಕಾರ ಪ್ರಾರಂಭವಾಗಿದ್ದು 1954ರಲ್ಲಿ. ಮೊದಲನೇ ಸಲ ಸಿ. ರಾಜಗೋಪಾಲಚಾರಿ, ಸಿ.ವಿ. ರಾಮನ್ ಹಾಗೂ ರಾಧಾಕೃಷ್ಣನ್‌ಗೆ ಭಾರತ ರತ್ನವನ್ನು ಕೊಡಲಾಯಿತು. 1955ರ ಸಾಲಿನ ಪುರಸ್ಕಾರ ಘೋಷಣೆಯಾದಾಗ ನಮ್ಮ ಕನ್ನಡ ನಾಡಿನ ಸುಪುತ್ರ ಸರ್. ಎಂ. ವಿಶ್ವೇಶ್ವರಯ್ಯನವರ ಹೆಸರಿತ್ತು. ಈ ದೇಶದ ಶ್ರೇಷ್ಠ ಪುರಸ್ಕಾರಕ್ಕೆ ತಮ್ಮನ್ನು ಆಯ್ಕೆ ಮಾಡಲಾಗಿದೆಯಲ್ಲಾ ಎಂದು ಹಿರಿಹಿರಿ ಹಿಗ್ಗುವ ಬದಲು, "ಅತ್ಯಂತ ಶ್ರೇಷ್ಠ ನಾಗರಿಕ ಪುರಸ್ಕಾರವನ್ನು ನೀಡಿದ್ದಕ್ಕೆ ಪ್ರತಿಯಾಗಿ ನಾನು ನಿಮ್ಮ ಸರ್ಕಾರವನ್ನು ಹೊಗಳಬೇಕೆಂದು ನಿರೀಕ್ಷಿಸಬೇಡಿ. ನಾನು ಈಗಲೂ, ಮುಂದೆಯೂ ನಿಮ್ಮ ಟೀಕಾಕಾರನೇ" ಎಂದುಬಿಟ್ಟರು ವಿಶ್ವೇಶ್ವರಯ್ಯ. "ನಿಮ್ಮ ಬೌದ್ಧಿಕ ಸಮಗ್ರತೆ, ಸಾಮರ್ಥ್ಯ, ಸಾಧನೆ, ನಿಷ್ಪಕ್ಷಪಾತ ಧೋರಣೆಯನ್ನು ಗಣನೆಗೆ ತೆಗೆದುಕೊಂಡು ಭಾರತ ರತ್ನವನ್ನು ನಿಮಗೆ ನೀಡಲಾಗುತ್ತಿದೆ. ದಯವಿಟ್ಟು ಸ್ವೀಕರಿಸಿ" ಎಂದು ಪ್ರಧಾನಿ ನೆಹರು ಅರಿಕೆ ಮಾಡಿಕೊಳ್ಳಬೇಕಾಗಿ ಬಂತು.
ಒಮ್ಮೆ ಹೀಗೂ ಆಗಿತ್ತು. ಅದು 1947. ಆಖಿಲ ಭಾರತ ಉತ್ಪಾದಕರ ಸಂಘಟನೆಯ ವಾರ್ಷಿಕ ಸಭೆ ಆಯೋಜನೆಯಾಗಿತ್ತು ಹಾಗೂ ಅದನ್ನು ಪ್ರಧಾನಿ ಜವಾಹರಲಾಲ್ ನೆಹರು ಉದ್ಘಾಟನೆ ಮಾಡಿದರು. ಅದೇ ವೇದಿಕೆಯಲ್ಲಿದ್ದ ವಿಶ್ವೇಶ್ವರಯ್ಯನವರು ಮಾತಿಗೆ ನಿಂತರು. ಕೈಗಾರಿಕೆಗಳ ವಿಷಯದಲ್ಲಿ ಸರ್ಕಾರ ತೋರುತ್ತಿದ್ದ ಉದಾಸೀನ ಧೋರಣೆಯನ್ನು ಹಿಗ್ಗಾಮುಗ್ಗಾ ಟೀಕಿಸಲಾರಂಭಿಸಿದರು. ಇತ್ತ ಕೋಪೋದ್ರಿಕ್ತರಾಗಿ ನೆಹರು ತುಟಿಕಚ್ಚಿಕೊಳ್ಳುತ್ತಿರುವುದನ್ನು ನೆರೆದಿದ್ದವರೆಲ್ಲ ನೋಡಿದರು. ಮೊದಲೇ ಹಮ್ಮು-ಬಿಮ್ಮಿನ, ಸೊಕ್ಕಿನ ಮನುಷ್ಯನಾಗಿದ್ದ ನೆಹರು ಅವರು, ವಿಶ್ವೇಶ್ವರಯ್ಯನವರ ಭಾಷಣ ಮುಗಿಯುತ್ತಲೇ ಮೈಕ್‌ನತ್ತ ಧಾವಿಸಿದರು. ಅಷ್ಟೇ ಪರಿಣಾಮಕಾರಿಯಾಗಿ ಪ್ರತಿದಾಳಿ ಮಾಡಿದರು. ಹಾಗಂತ ವಿಶ್ವೇಶ್ವರಯ್ಯನವರು ದಿಗ್ಭ್ರಮೆಗೊಳಗಾಗಲಿಲ್ಲ, ನೆಹರು ಅವರನ್ನು ಮಧ್ಯದಲ್ಲೇ ತಡೆದು ಸೂಕ್ತ ಮಾರುತ್ತರ ಕೊಟ್ಟರು. ಇಡೀ ವಾತಾವರಣವೇ ಬಿಸಿಯಾಯಿತು. ಆದರೂ ವಿಶ್ವೇಶ್ವರಯ್ಯನವರು ಪ್ರಧಾನಿಗೆ ಸೂಕ್ತ ಉತ್ತರ ಕೊಡದೆ ಸುಮ್ಮನಾಗಲಿಲ್ಲ.
ಅಂಥ ವ್ಯಕ್ತಿತ್ವ ವಿಶ್ವೇಶ್ವರಯ್ಯನವರದ್ದು!
"ಈ ದೇಶದಲ್ಲಿ ಯೋಜನೆ ಅನ್ನೋ ಒಟ್ಟಾರೆ ಕಲ್ಪನೆ ಆರಂಭವಾಗಿದ್ದೇ ವಿಶ್ವೇಶ್ವರಯ್ಯನವರಿಂದ. ನಮ್ಮ ಕೈಗಾರಿಕಾ ಕ್ರಾಂತಿ ಅನ್ನುವುದು ಏನಿದೆ ಅದರ ಪ್ರಗತಿಯ ಮೂಲ ಪ್ರೇರಣೆ ವಿಶ್ವೇಶ್ವರಯ್ಯನವರ ಯೋಚನೆ, ಚಿಂತನೆಗಳಾಗಿವೆ" ಎಂದಿದ್ದರು ನಮ್ಮ ದೇಶದ ಜನಪ್ರಿಯ ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣನ್. ವಿಶ್ವೇಶ್ವರಯ್ಯನವರಿಗೆ ಗಾಂಧೀಜಿ ಬಗ್ಗೆ, ಗಾಂಧೀಜಿಗೆ ವಿಶ್ವೇಶ್ವರಯ್ಯನವರ ಬಗ್ಗೆ ಅಪಾರ ಗೌರವಾದರಗಳಿದ್ದವು. ಆದರೂ ವಿಶ್ವೇಶ್ವರಯ್ಯನವರು ಗಾಂಧೀಜಿಯವರ ಆರ್ಥಿಕ ಚಿಂತನೆಗಳ ಕಟ್ಟಾ ವಿರೋಧಿಯಾಗಿದ್ದರು. ಗಾಂಧಿಯವರ ಗುಡಿ ಕೈಗಾರಿಕೆಗಳ ಕಲ್ಪನೆಯನ್ನು ವಿಶ್ವೇಶ್ವರಯ್ಯನವರು ಸಾರಾಸಗಟಾಗಿ ತಿರಸ್ಕರಿಸಿ ದ್ದರು. ಅದರಿಂದ ದೇಶದ ಪ್ರಗತಿ ಸಾಧ್ಯವಿಲ್ಲ, ಭಾರೀ ಪ್ರಮಾಣದ ಕೈಗಾರಿಕೀಕರಣದಿಂದಷ್ಟೇ ದೇಶ ಮುಂದುವರಿಯಲು ಸಾಧ್ಯ ಎಂದು ನಂಬಿದ್ದರು. ಭಾರತ ರಾಷ್ಟ್ರೀಯ ಕಾಂಗ್ರೆಸ್‌ನಲ್ಲೂ ವಿಶ್ವೇಶ್ವರಯ್ಯನವರಿಗೆ ದಾದಾಭಾಯಿ ನವರೋಜಿ, ರಾನಡೆ, ಗೋಖಲೆಯವರ ಜತೆ ತಾಳಮೇಳ ಹೊಂದಿಕೆಯಾಗುತ್ತಿತ್ತೇ ಹೊರತು, ಗಾಂಧಿ, ತಿಲಕರಲ್ಲಲ್ಲ. ಗಾಂಧಿ, ತಿಲಕರು ಪೂರ್ಣ ಸ್ವರಾಜ್ಯ ಅಥವಾ ಸಂಪೂರ್ಣ ಸ್ವಾತಂತ್ರ್ಯ ಬೇಕು ಎಂದು ಪ್ರತಿಪಾದಿಸಿದರೆ, ರಾನಡೆ, ಗೋಖಲೆ, ವಿಶ್ವೇಶ್ವರಯ್ಯನವರು ಮೊದಲಿಗೆ "ಡೊಮಿನಿಯನ್ ಸ್ಟೇಟಸ್‌" ಅಷ್ಟೇ ಸಾಕು ಎನ್ನುತ್ತಿದ್ದರು. ಡೊಮಿನಿಯನ್ ಸ್ಟೇಟಸ್‌ಗೂ ಪೂರ್ಣ ಸ್ವರಾಜ್ಯಕ್ಕೂ ಬಹಳ ವ್ಯತ್ಯಾಸವಿರಲಿಲ್ಲ, ಆದರೆ ವಿಶ್ವೇಶ್ವರಯ್ಯನವರ ವಾದದ ಹಿಂದಿರುವ ಯೋಚನೆ ಗಾಂಧೀಜಿಯವರಂಥ ಭಾವುಕಜೀವಿಗಳಿಗೆ, ಮೊಂಡುವಾದಿಗಳಿಗೆ ಅರ್ಥವಾಗುತ್ತಿರಲಿಲ್ಲ. ಡೊಮಿನಿಯನ್ ಸ್ಟೇಟಸ್ ಎಂದರೆ ಬ್ರಿಟಿಷ್ ಸಾಮ್ರಾಜ್ಯದೊಳಗಿದ್ದುಕೊಂಡು ಸಂಪೂರ್ಣ ಸ್ವಾಯತ್ತೆ ಅನುಭವಿಸುವುದು. ಅಂದರೆ ಅದು ಆಂತರಿಕ ವಿಚಾರವಿರಬಹುದು, ವಿದೇಶಾಂಗ ವಿಷಯವಾಗಿರಬಹುದು ಪ್ರತಿ ರಾಜ್ಯಗಳಿಗೂ ಸಮಾನ ಹಕ್ಕು, ಅಧಿಕಾರವಿರುತ್ತದೆ. ಬ್ರಿಟನ್ ರಾಣಿಗೆ ಅಧೀನವಾಗಿದ್ದರೂ ಬ್ರಿಟಿಷ್ ಕಾಮನ್ವೆಲ್ತ್ ದೇಶಗಳೊಂದಿಗೆ ಮುಕ್ತವಾಗಿ ವ್ಯವಹರಿಸಬಹುದು ಹಾಗೂ ಸಂಬಂಧವಿಟ್ಟುಕೊಳ್ಳಬಹುದು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ತಾಂತ್ರಿಕವಾಗಿ ಬ್ರಿಟನ್‌ಗೆ ನಿಷ್ಠೆ ಇಟ್ಟುಕೊಂಡು ಸ್ವತಂತ್ರ ಆಡಳಿತ ನಡೆಸಿಕೊಳ್ಳುವುದು. ಇಂಥ ಡೊಮಿನಿಯನ್ ಸ್ಟೇಟಸ್‌ಗೆ ಒತ್ತಾಯಿಸಿದ್ದರ ಹಿಂದೆ ಕೂಡ ಒಂದು ಒಳ್ಳೆಯ ಯೋಚನೆ ಇತ್ತು!
1. ಒಂದು ಚುನಾಯಿತ ಭಾರತೀಯ ಸರ್ಕಾರಕ್ಕೆ ಅಧಿಕಾರ ಹಸ್ತಾಂತರ ಮಾಡುವಂತೆ ಸುಲಭವಾಗಿ ಬ್ರಿಟಿಷರನ್ನು ಮನವೊಲಿಸಬಹುದು.
2. ಸೇನೆ, ಆಡಳಿತಶಾಹಿಯ ಭಾರತೀಕರಣದಂಥ ಆಂತರಿಕ ವಿಷಯಗಳನ್ನು ಸರಿಪಡಿಸಿಕೊಳ್ಳಲು, ಪ್ರಿನ್ಸ್ಲಿ ಸ್ಟೇಟ್ಸ್(ಅಧೀನ ಸಂಸ್ಥಾನ)ಗಳನ್ನು ಭಾರತದ ಒಕ್ಕೂಟಕ್ಕೆ ಸೇರಿಕೊಳ್ಳುವಂತೆ ಮಾಡಲು, ಕೋಮು ವಿವಾದವನ್ನು(ಧರ್ಮದ ಆಧಾರದ ಮೇಲೆ ದೇಶ ವಿಭಜನೆ) ಬಗೆಹರಿಸಿಕೊಳ್ಳಲು ಭಾರತಕ್ಕೆ ಸಾಕಷ್ಟು ಸಮಯ ಸಿಗುತ್ತದೆ.
3. ಇವುಗಳನ್ನು ಸರಿಪಡಿಸಿಕೊಳ್ಳುವ ಜತೆಗೆ ಬಾಹ್ಯ ಆಕ್ರಮಣ, ಬೆದರಿಕೆಗಳಿಗೆ ಸೂಕ್ತ ರಕ್ಷಣೆಯನ್ನು ಸಿದ್ಧಪಡಿಸಿಕೊಳ್ಳಲೂ ಕಾಲಾವಕಾಶ ಸಿಗುತ್ತದೆ.
ನಮಗೆ ಪೂರ್ಣ ಸ್ವರಾಜ್ಯ (ಸ್ವಾತಂತ್ರ್ಯ) ಸಿಕ್ಕಿದ ಮರುಕ್ಷಣವೇ ಸೃಷ್ಟಿಯಾದ ಪರಿಸ್ಥಿತಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಪೂರ್ಣ ಸ್ವರಾಜ್ಯ ಸಿಕ್ಕಿದ್ದೇ ಕಡೇ ಕ್ಷಣದಲ್ಲಿ ದೇಶ ವಿಭಜನೆಗೆ ಒಪ್ಪಿದ ಕಾರಣ. ಅದರ ಬೆನ್ನಲ್ಲೇ ರಕ್ತಪಾತವಾಯಿತು. ಪಾಕಿಸ್ತಾನದಿಂದ ಬಂದ ರೈಲುಗಳಲ್ಲಿ ಸಿಖ್ಖರ, ಹಿಂದುಗಳ ಹೆಣಗಳೇ ಹೆಚ್ಚು ತುಂಬಿರುತ್ತಿದ್ದವು. ಬ್ರಿಟನ್ ರಾಣಿಗೆ ನಿಷ್ಠನಾಗಿದ್ದ ಲಾರ್ಡ್ ಮೌಂಟ್ ಬ್ಯಾಟನ್‌ರನ್ನೇ ಭಾರತ ಮೊದಲ ಗವರ್ನರ್ ಜನರಲ್ ಆಗಿ ಅಧಿಕಾರ ವಹಿಸಿಕೊಳ್ಳಬೇಕೆಂದು ಬೇಡಬೇಕಾದ ದುಸ್ಥಿತಿ ಎದುರಾಯಿತು. ಅಧೀನ ಸಂಸ್ಥಾನಗಳು, ನಿಜಾಮ, ಪೋರ್ಚುಗೀಸರನ್ನು ಬಗ್ಗುಬಡಿದು ಭಾರತದ ಎಲ್ಲ ಭಾಗಗಳೂ ಸ್ವತಂತ್ರಗೊಳ್ಳುವಷ್ಟರಲ್ಲಿ 1962 ಬಂತು. ಅಷ್ಟರಲ್ಲಿ, ಪಾಕಿಸ್ತಾನ ಒಂದಷ್ಟು, ಚೀನಾ ಮತ್ತೊಂದಿಷ್ಟನ್ನು ಕಬಳಿಸಿದ್ದವು. ಇಂಥ ಅಪಾಯಗಳನ್ನು ಮುಂದಾಗಿ ಊಹಿಸಿದ್ದ ಮಹಾನುಭಾವ ವಿಶ್ವೇಶ್ವರಯ್ಯನವರು. ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡದೇ ಇರಬಹುದು, ಆದರೆ ಸ್ವತಂತ್ರ ಭಾರತಕ್ಕೆ ಹೇಗೆ ಅಡಿಗಲ್ಲು ಇಡಬೇಕು, ಹೇಗೆ ನಿರ್ಮಾಣ ಮಾಡಬೇಕು ಎಂಬುದನ್ನು ಯೋಚಿಸಿದ್ದರು. ವಿಶ್ವೇಶ್ವರಯ್ಯನವರ ಪಾಲಿಗೆ ಡೊಮಿನಿಯನ್ ಸ್ಟೇಟ್ಸ್‌ಗಾಗಿನ ಒತ್ತಾಯ ಭಾರತವನ್ನು ಆರ್ಥಿಕವಾಗಿ ಪುನರ್ ನಿರ್ಮಾಣ ಮಾಡುವುದಾಗಿತ್ತು ಹಾಗೂ ಆರ್ಥಿಕ ಸ್ವಾತಂತ್ರ್ಯವಾಗಿತ್ತು. ಡೊಮಿನಿಯನ್ ಸ್ಟೇಟ್ ಆಗಿದ್ದ ಕೆನಡಾ ಬ್ರಿಟಿಷರ ಅಧೀನದಲ್ಲಿದ್ದೇ ಹೇಗೆ ಉದ್ಧಾರವಾಯಿತು ಎಂಬುದು ನಮಗೆ ತಿಳಿದಿಲ್ಲವೆ?
ನಮ್ಮ ಮಿಲಿಟರಿ ಬಗ್ಗೆಯೂ ಅವರಿಗೆ ಮೂರು ಕನಸ್ಸುಗಳಿದ್ದವು!
1. ಬಾಹ್ಯ ಶಕ್ತಿಗಳ ಆಕ್ರಮಣದಿಂದ ರಕ್ಷಣೆ
2. ಹುಟ್ಟಾ ಸೋಮಾರಿಗಳಾಗಿದ್ದ ಭಾರತೀಯರಿಗೆ ಕಡ್ಡಾಯ ಮಿಲಿಟರಿ ತರಬೇತಿ ನೀಡಿ ಶಿಸ್ತುಬದ್ಧ ಜೀವನಕ್ಕೆ ತಯಾರಿ ಮಾಡುವುದು
3. ಮಿಲಿಟರಿ ಎಂದರೆ ಒಂದು ದೊಡ್ಡ ಮಾರುಕಟ್ಟೆ. ಬೃಹತ್ ಕೈಗಾರಿಕೆಗಳಿಗೆ ದಾರಿ ಮಾಡಿಕೊಡುತ್ತದೆ. ಮಿಲಿಟರಿ ಉಪಕರಣಗಳ ತಯಾರಿ ಭಾರೀ ಕೈಗಾರಿಕಾ ಉತ್ಪಾದನೆಗೆ, ಉಕ್ಕಿನ ಬೇಡಿಕೆಗೆ ದಾರಿ ಮಾಡಿಕೊಡುತ್ತದೆ. ಜತೆಗೆ ಅಪಾರ ಉದ್ಯೋಗ ಸೃಷ್ಟಿಯಾಗುತ್ತದೆ.
1920ರ ದಶಕದಲ್ಲೇ ವಿಶ್ವೇಶ್ವರಯ್ಯನವರು ಹೀಗೆಲ್ಲಾ ಯೋಚಿಸಿದ್ದರು! ಇತ್ತೀಚೆಗೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತೆರೆದಿಟ್ಟ "ರೈನ್‌ಬೋ" ನೀತಿ ಹಾಗೂ ಅವರು ಆಗಾಗ್ಗೆ ಮಾತನಾಡುವ ಡಿಫೆನ್ಸ್ ಮ್ಯಾನ್ಯುಫ್ಯಾಕ್ಚರಿಂಗ್ ಕೂಡ ಇದೇ ಆಗಿದೆ. ಇನ್ನು ಮೋದಿ ಹೇಳುವ "ಮಿನಿಮಮ್ ಗವರ್ನಮೆಂಟ್, ಮ್ಯಾಕ್ಸಿಮಮ್ ಗವರ್ನೆನ್ಸ್‌" (ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ) ಹಾಗೂ ಖಾಸಗಿ ಕ್ಷೇತ್ರಕ್ಕೆ ಉತ್ತೇಜನದ ವಿಷಯ ತೆಗೆದುಕೊಳ್ಳಿ ಅಥವಾ ಅಟಲ್ ಬಿಹಾರಿ ವಾಜಪೇಯಿಯವರು ಬಂಡವಾಳ ಹಿಂತೆಗೆತ ಖಾತೆ ವಿಷಯ ನೋಡಿ ಅಥವಾ ಬಿಳಿ ಆನೆಗಳಾಗಿರುವ ಇಂಡಿಯನ್ ಏರಲೈನ್ಸ್ ಮತ್ತು ಏರ್ ಇಂಡಿಯಾಗಳ ಖಾಸಗೀಕರಣಕ್ಕಾಗಿನ ಕೂಗು ತೆಗೆದುಕೊಳ್ಳಿ... ರಾಷ್ಟ್ರೀಕರಣ ಎಂಬ ಕಲ್ಪನೆಯನ್ನು, ಯದ್ವಾತದ್ವಾ ರಾಷ್ಟ್ರೀಕರಣ ಮಾಡುವುದನ್ನು ಮೊದಲು ವಿರೋಧಿಸಿದ್ದೇ ವಿಶ್ವೇಶ್ವರಯ್ಯ. ತಮ್ಮ ವಾದಕ್ಕೆ ಸರ್ದಾರ್ ಪಟೇಲರ ಬೆಂಬಲ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾದರು. ಆದರೂ ಪ್ರಧಾನಿ ಜವಾಹರಲಾಲ್ ನೆಹರು 1953ರಲ್ಲಿ ಟಾಟಾ ಏರ್‌ಲೈನ್ಸನ್ನು ರಾಷ್ಟ್ರೀಕರಣ ಮಾಡಲು ಮುಂದಾದರು. ಆಗ ಭಾರತದಲ್ಲಿ ನಾಗರಿಕ ವಿಮಾನಯಾನವೆಂಬುದೇ ಇರಲಿಲ್ಲ. ಜೆ.ಆರ್.ಡಿ. ಟಾಟಾ ಅವರು ಮಿಲಿಟರಿ ಸಾಗಣೆ ವಿಮಾನಗಳನ್ನು ಖರೀದಿಸಿ, ಖರೀದಿಗಿಂತ ಹೆಚ್ಚು ಹಣ ವೆಚ್ಚ ಮಾಡಿ ಅವುಗಳನ್ನು ಜನಸಾಗಣೆ ವಿಮಾನಗಳನ್ನಾಗಿ ಮಾಡಿ ದೇಶದಲ್ಲಿ ಯಶಸ್ವಿ ನಾಗರಿಕ ವಿಮಾನಯಾನವನ್ನು ರೂಪಿಸಿದ್ದರು. ಅಂತಹ ಪರಿಶ್ರಮ ಹಾಗೂ ಉದ್ಯಮಶೀಲತೆಗೆ ಕಿಂಚಿತ್ತೂ ಬೆಲೆ ಕೊಡದೆ ನೆಹರು ರಾಷ್ಟ್ರೀಕರಣ ಮಾಡಿದರು, ಟಾಟಾ ತುಂಬಾ ನೊಂದುಕೊಂಡರು. ಇಂಥ ರಾಷ್ಟ್ರೀಕರಣವನ್ನು ಖಡಾಖಂಡಿತವಾಗಿ ವಿರೋಧಿಸಿದ ಗಟ್ಟಿಗ ವಿಶ್ವೇಶ್ವರಯ್ಯ. ಸರ್ಕಾರ ಎಲ್ಲ ವಿಷಯಗಳ ಮೇಲೂ ಸಂಪೂರ್ಣ ನಿಯಂತ್ರಣ ಹಾಗೂ ಅಧಿಕಾರ ಇಟ್ಟುಕೊಳ್ಳಬಾರದು ಎಂಬ ತಮ್ಮ ವಾದಕ್ಕೆ 1946ರಲ್ಲೇ ಪಟೇಲ್, ಗಾಂಧೀಜಿಯವರ ಸಹಮತಿಯನ್ನೂ ಪಡೆದುಕೊಂಡಿದ್ದರು.
ವಿಶ್ವೇಶ್ವರಯ್ಯ ಎಂದ ಕೂಡಲೇ ಕೇವಲ ಒಬ್ಬ ವಿಜ್ಞಾನಿ, ಒಳ್ಳೆಯ ದಿವಾನ, ಒಳ್ಳೆಯ ಆಡಳಿತಗಾರ ಎಂದಷ್ಟೇ ಭಾವಿಸಬೇಡಿ. 20ನೇ ಶತಮಾನದ ಭಾರತದ ಇತಿಹಾಸದಲ್ಲಿ ಅರ್ಥವ್ಯವಸ್ಥೆ ಹಾಗೂ ಸರ್ವಾಂಗೀಣ ಅಭಿವೃದ್ಧಿ ಬಗ್ಗೆ ಅವರಷ್ಟು ದೂರದೃಷ್ಟಿ ಹೊಂದಿದ್ದ ಇನ್ನೊಬ್ಬ ವ್ಯಕ್ತಿ ಭಾರತದಲ್ಲಿ ಜನಿಸಲಿಲ್ಲ. ಗಾಂಧೀಜಿಯವರ ಗ್ರಾಮಸ್ವರಾಜ್ಯವೆಂಬ ಆರ್ಥಿಕ ಚಿಂತನೆಯನ್ನು ತಿರಸ್ಕರಿಸುತ್ತಾ, "ನಾವು ಅತ್ಯಂತ ವೇಗವಾಗಿ ಬದಲಾಗುತ್ತಿರುವ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಕಳೆದ 300 ವರ್ಷಗಳಲ್ಲಿ ನಾವು ಕಂಡಿದ್ದಕ್ಕಿಂತ ವೇಗದ, ಅಭೂತಪೂರ್ವ ಬದಲಾವಣೆಯನ್ನು ಹಿಂದಿನ ಕೇವಲ 40 ವರ್ಷಗಳಲ್ಲಿ ಕಂಡಿದ್ದೇವೆ. ವೈಜ್ಞಾನಿಕ ಸಂಶೋಧನೆ ಹಾಗೂ ತಾಂತ್ರಿಕ ಶೋಧನೆ ಹೊಸ ಶಕೆಗೆ ಜನ್ಮ ನೀಡಿದೆ..." ಎಂದಿದ್ದರು.
1917ರಲ್ಲಿ ವೈಸರಾಯ್ ಲಾರ್ಡ್ ಚೆಮ್ಷ್‌ಫರ್ಡ್ ಹಾಗೂ ಭಾರತದ ವಿದೇಶಾಂಗ ಕಾರ್ಯದರ್ಶಿಯಾಗಿ ಬ್ರಿಟನ್‌ನಿಂದ ನಿಯುಕ್ತಿಯಾಗಿದ್ದ ಮಾಂಟೆಗು ಭಾರತದ ಪ್ರವಾಸ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿದ್ದ ವಿಶ್ವೇಶ್ವರಯ್ಯನವರು ಕೆಲವೊಂದು ಸಾಂವಿಧಾನಿಕ ಬದಲಾವಣೆಗಳನ್ನು ತರಬೇಕಾದ ಅಗತ್ಯವಿದೆ ಎಂದರು. ಅವುಗಳನ್ನು ಕೇಳಿ ಮಾಂಟೆಗು ಎಷ್ಟು ಮನಸೋತರೆಂದರೆ 1920ರಲ್ಲಿ ಬ್ರಿಟನ್ ಪ್ರವಾಸ ಕೈಗೊಂಡಿದ್ದ ವಿಶ್ವೇಶ್ವರಯ್ಯವರಿಗೆ ಶಾಸನ ಸಭೆಯ ಸದಸ್ಯತ್ವವನ್ನು ನೀಡಲು ಮುಂದಾದರು. ಆದರೆ ಅದನ್ನು ತಿರಸ್ಕರಿಸಿದ ವಿಶ್ವೇಶ್ವರಯ್ಯನವರು ನನಗೆ ಶಾಸನಸಭೆಯಲ್ಲಿ ಕೂರುವುದಕ್ಕೆ ಬದಲು ರಚನಾತ್ಮಕ ಕೆಲಸ ಮಾಡುವುದು ಇಷ್ಟ ಎಂದರು. ವಿಶ್ವೇಶ್ವರಯ್ಯನವರು  ಭದ್ರಾವತಿಯಲ್ಲಿ ಉಕ್ಕಿನ ಕಾರ್ಖಾನೆಯನ್ನು ನಿರ್ಮಾಣ ಮಾಡಿದಾಗ ಮೊದಲು ಅಚ್ಚುಹಾಕಿದ್ದು ಗಣೇಶನನ್ನು! ಗಣೇಶ ವಿಘ್ನನಿವಾರಕನಾದರೆ, ಮೈಸೂರು, ಮಂಡ್ಯ, ಚಾಮರಾಜನಗರಗಳನ್ನು ಹಸಿರಾಗಿಸಿದ, ಬೆಂಗಳೂರನ್ನು ಬೆಳಗಿದ ಹಾಗೂ ದಾಹವನ್ನೂ ನೀಗಿದ, ಹಿಂದುಸ್ಥಾನ್ ಏರ್‌ಕ್ರಾಫ್ಟ್‌ಫ್ಯಾಕ್ಟರಿ ಸ್ಥಾಪನೆ ಮಾಡುವಂತೆ ಮಾಡುವ ಮೂಲಕ ಬೆಂಗಳೂರಿಗೆ ವಿಮಾನ ತಂದ, ಪ್ರಿಮಿಯರ್ ಆಟೋಮೊಬೈಲ್ ಕಂಪನಿ ಭಾರತಕ್ಕೆ ಆಗಮಿಸುವಂತೆ ಮಾಡಿ ಕಾರು ಉತ್ಪಾದನೆಗೆ ದಾರಿ ಮಾಡಿಕೊಟ್ಟ ಈ ದೇಶದ ಸುಪುತ್ರ ವಿಶ್ವೇಶ್ವರಯ್ಯ. ಇಂಥ ವಿಶ್ವೇಶ್ವರಯ್ಯನವರ ಬಗ್ಗೆ ಸಾಕಷ್ಟು ಪುಸ್ತಕಗಳು ಬಂದಿವೆ. ಬಹಳ ಪ್ರಚಲಿತದಲ್ಲಿರುವುದು ಸ್ವತಃ ಅವರೇ ಬರೆದ ಹಾಗೂ ಗಜಾನನ ಶರ್ಮ ಅವರು ಕನ್ನಡಕ್ಕೆ ತಂದಿರುವ "ನನ್ನ ವೃತ್ತಿ ಜೀವನದ ನೆನಪುಗಳು" ಕೃತಿ. ಇತ್ತ ಉದ್ಯಮಿಯಾಗಿದ್ದರೂ ಓದಿನ ಗೀಳು ಇಟ್ಟುಕೊಂಡಿರುವ ಶ್ರೀನಾಥ್ ಎಚ್.ಎಸ್. ಅವರು ಬಹಳ ತಡಕಾಡಿ, ಸಂಶೋಧಿಸಿ "ಭಾರತ ರತ್ನ ವಿಶ್ವೇಶ್ವರಯ್ಯ: ಹಿಸ್ ಇಕನಾಮಿಕ್ ಕಾಂಟ್ರಿಬ್ಯೂಶನ್ ಆ್ಯಂಡ್ ಥಾಟ್‌" ಎಂಬ ಕೃತಿಯನ್ನು ಸಿದ್ಧಪಡಿಸಿದ್ದಾರೆ. ಇದು ವಿಶ್ವೇಶ್ವರಯ್ಯನವರ ಆರ್ಥಿಕ ಕೊಡುಗೆ, ಚಿಂತನೆಗಳನ್ನು ಸವಿಸ್ತಾರವಾಗಿ ಕಟ್ಟಿಕೊಡುತ್ತದೆ. ಪುಸ್ತಕ ನಾಳೆ ಬೆಂಗಳೂರಿನ ಬಸವನಗುಡಿಯಲ್ಲಿರುವ ಗೋಖಲೆ ಇನ್ಸ್‌ಟಿಟ್ಯೂಟಿನಲ್ಲಿ ಬೆಳಗ್ಗೆ 10.30 ಗಂಟೆಗೆ ಬಿಡುಗಡೆಯಾಗಲಿದೆ. ವಿಶ್ವೇಶ್ವರಯ್ಯನವರ ಬಗ್ಗೆ ಓದುವುದು, ತಿಳಿದುಕೊಳ್ಳುವುದೆಂದರೆ ಬದುಕಿಗೊಂದು ಪ್ರೇರಣೆ, ಉತ್ತೇಜನ ದೊರೆತಂತೆ. ಅದು ನಿಮ್ಮದಾಗಲಿ.

Comments