ನಟರಾಜ ನರ್ತನದ ಚಿದಂಬರ ರಹಸ್ಯ!

‘ಕಣ್ಣಿನಿಂದ ನೋಡಿದ್ದು ಮಾತ್ರ ಸತ್ಯ’ – ಹಾಗಂತ ಅನೇಕರು ವಾದಿಸುತ್ತಾರೆ. ಅಚ್ಚರಿ ಏನು ಗೊತ್ತೆ? ಕಣ್ಣು ತನ್ನನ್ನು  ತಾನು ನೋಡಿಯೇ ಇಲ್ಲ! ಚರ್ಮಕ್ಕೆ ಸ್ಪರ್ಶಾನುಭೂತಿ ಬೇಕೆಂದರೆ ಮತ್ತೊಂದರ ಸಂಪರ್ಕ ಬೇಕೇಬೇಕು. ನಾಲಗೆಯ ರುಚಿ ಸ್ವತಃ ನಾಲಗೆಗೆ ಗೊತ್ತಿಲ್ಲ. ಹೀಗೆ ಐದು ಇಂದ್ರಿಯಗಳೂ ಒಟ್ಟಿಗೆ ಗ್ರಹಿಸಲಾಗದ ಅನೇಕ ಸಂಗತಿಗಳಿವೆ. ಅದರ ಹುಡುಕಾಟವೇ ಭಾರತದ ಶ್ರೇಷ್ಠತೆಯ ಮೂಲ ವಸ್ತು. ಕೇನೋಪನಿಷತ್ತಿನಲ್ಲಿ ಋಷಿಗಳು ಸ್ಪಷ್ಟಪಡಿಸುತ್ತಾರೆ – “ಅಲ್ಲಿಗೆ ಕಣ್ಣು ಹೋಗಲಾರದು, ಮಾತೂ ಇಲ್ಲ. ಮನಸ್ಸೂ ಹೋಗುವುದಿಲ್ಲವಾದ್ದರಿಂದ ಇದನ್ನು ಹೇಗೆ ತಿಳಿಸಿಕೊಡಬೇಕೋ ಗೊತ್ತಾಗುತ್ತಿಲ್ಲ” ಎಂದು. ಅದಕ್ಕೇ ಇಂದ್ರಿಯಗಳನ್ನು ನಿಗ್ರಹಿಸಿ, ಬುದ್ಧಿಯಡಿ ಮನಸ್ಸನ್ನು ತಂದು ಸಾಧನೆಗೆ ಅಣಿಯಾಗುವ ಮಾರ್ಗಗಳನ್ನು ಅವರು ಸಂಶೋಧಿಸಿದ್ದು. ಈ ಹುಡುಕಾಟದ ಹಿಂದೆ ಬಿದ್ದುದರಿಂದಲೇ ಸೃಷ್ಟಿಯ ಅಪರೂಪದ ಸತ್ಯಗಳು ಅವರೆದುರಿಗೆ ತೆರೆದುಕೊಂಡವು. ಈ ಸತ್ಯಗಳನ್ನು ಜಗದೆದುರಿಗೆ ಒಪ್ಪಿಸುವ ಪದಕೋಶಗಳೇ ಇರಲಿಲ್ಲ. ಹೇಳಿದರೆ ಅರ್ಥೈಸಿಕೊಳ್ಳುವವರೂ ಇರಲಿಲ್ಲ. ಎಲ್ಲಕ್ಕೂ ಮುಖ್ಯವಾಗಿ ಆ ಪರಮ ಸತ್ಯ ಗೋಚರವಾದೊಡನೆ ಅದರಲ್ಲಿ ಲೀನವಾದ ಪ್ರತಿಯೊಬ್ಬ ಋಷಿಯೂ ಮೌನಿಯಾಗಿಬಿಟ್ಟ. ಹಾಗೆಂದೇ ಅದನ್ನು ವಿವರಿಸಲಾಗದು; ಅನುಭವಿಸಬೇಕು ಎನ್ನಲಾಯ್ತು. ಕೇನೋಪನಿಷತ್ತು ಮುಂದುವರಿದು, “ಮಾತಿನಿಂದ ವಿವರಿಸಲಾಗದ್ದು, ಯಾವುದರಿಂದ ಮಾತು ಹುಟ್ಟಿತೋ ಅದು; ಯಾವುದನ್ನು ಮನಸ್ಸಿನಿಂದ ತಿಳಿಯಲಾಗದೋ, ಯಾವುದು ಮನಸ್ಸನ್ನೇ ಅರಿತುಕೊಂಡಿದೆಯೋ ಅದು ಬ್ರಹ್ಮ” ಎಂದಿತು.
ಸೃಷ್ಟಿಯ ಈ ರಹಸ್ಯವನ್ನು ಜನ ಸಾಮಾನ್ಯರೆದುರಿಗೆ ಮುಟ್ಟಿಸಬೇಕೆಂಬ ಪ್ರಯತ್ನಕ್ಕೇ ಭಾಷೆ ಹುಟ್ಟಿತು, ಪರಿಷ್ಕರಣಗೊಂಡಿತು. ಕಲೆ ಭಿನ್ನ ವಿಭಿನ್ನ ರೂಪ ಪಡಕೊಂಡಿತು. ಆಚರಣೆಗಳು ರೂಪುಗೊಂಡವು. ಮಂತ್ರಗಳು, ಅರ್ಥಗಳು, ವ್ಯಾಖ್ಯಾನಗಳು, ಆಚಾರ್ಯರು, ಗುರುಗಳು, ಮಂದಿರಗಳು, ಯೋಗ – ಪ್ರಾಣಾಯಾಮ ಮೊದಲಾದವೆಲ್ಲವೂ ಆ ಸೃಷ್ಟಿ ರಹಸ್ಯವನ್ನು, ಪರಬ್ರಹ್ಮ ತತ್ತ್ವವನ್ನೂ ಅರಿಯುವ ಮಹಾ ಪ್ರಯಾಸಕ್ಕಾಗಿ ರೂಪುಗೊಂಡಂಥವೇ.
ವಿಜ್ಞಾನಿಗಳು ದೊಡ್ಡ ದೊಡ್ಡ ಪ್ರಯೋಗ ಶಾಲೆಗಳನ್ನು ಕಟ್ಟಿದರು.  ಋಷಿಗಳು ಮನಸ್ಸನ್ನೆ ಪ್ರಯೋಗಶಾಲೆಯನ್ನಾಗಿಸಿ ಹುಡುಕಾಟ ನಡೆಸಿದರು. ವಿಜ್ಞಾನಿಗಳು ಇಂದ್ರಿಯಗಳ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಯಂತ್ರಗಳ ಆವಿಷ್ಕಾರ ಮಾಡಿದರು. ಋಷಿಗಳು ಇಂದ್ರಿಯಗಳನ್ನೇ ಹಿಡಿತಕ್ಕೆ ತಂದುಕೊಂಡು ಅಗೋಚರ ಸತ್ಯಗಳ ದರ್ಶನ ಮಾಡಿಕೊಂಡರು. ಹೀಗಾಗಿಯೇ ಭಾರತದ ವಿಚಾರ ಬಂದೊಡನೆ ಜಗತ್ತಿನ ಅನೇಕರು ನಿಬ್ಬೆರಗಾಗಿ ಕರಗಿ ಹೋಗುವುದು! cern-nataraja
ಪ್ರಯೋಗಾಲಯವೊಂದರಲ್ಲಿ ಆಕಾಶಕಾಯಗಳ ವೀಕ್ಷಣೆಗೆ ಬಳಸುವ ದೂರದರ್ಶಕವೊಂದರ ನಿರ್ಮಾಣಕ್ಕೆ, ಮಸೂರಗಳ ಜೋಡಣೆಗೆ ಎಷ್ಟು ಎಚ್ಚರಿಕೆ ವಹಿಸುತ್ತಾರೆ ಗೊತ್ತೆ? ಅತಿ ಸೂಕ್ಷ್ಮ ಬದಲಾವಣೆಯೂ ಲೆಕ್ಕಾಚಾರದಲ್ಲಿ ಬಲುದೊಡ್ಡ ಏರುಪೇರು ಉಂಟು ಮಾಡಬಲ್ಲದು. ಅದು ಬಿಡಿ. ಮನೆಯ ಮೇಲೆ ಬಗೆಬಗೆಯ ಚಾನೆಲ್ ವೀಕ್ಷಣೆಗೆಂದು ಕೂರಿಸಿರುವ ಡಿಶ್ – ಆಂಟೆನಾ ಒಂದು ಡಿಗ್ರಿಯಷ್ಟು ತಿರುಗಿದರೂ ಉಪಗ್ರಹ ಸಂದೇಶ ಸ್ವೀಕರಿಸಲಾರದು. ಅಂದಮೇಲೆ, ಋಷಿಗಳ ಪ್ರಯೋಗಶಾಲೆಯಾದ ಮನಸ್ಸೂ ಹಾಗೇ ತಾನೆ? ಅದಕ್ಕಾಗಿ ಅವರು ಒಂದಿನಿತೂ ವಿಚಲಿತವಾಗದಂತೆ ಮನಸ್ಸನ್ನು ರೂಪುಗೊಳಿಸುವ ಸಾಹಿತ್ಯ ರಚಿಸಿದರು. ಹಳಿ ತಪ್ಪಿದ್ದನ್ನು ಸರಿ ದಾರಿಗೆ ತರುವ ಮಾರ್ಗ ಹಾಕಿಕೊಟ್ಟರು. ಹೀಗಾಗಿಯೇ ಇಲ್ಲಿನ ಸಾಹಿತ್ಯಗಳಲ್ಲಿ ಜಗತ್ತಿನ ಬೇರೆಲ್ಲ ಮತಗ್ರಂಥಗಳಿಗಿಂತ ಹೆಚ್ಚು ನೈತಿಕ ಸಂಗತಿಗಳು ರಾರಾಜಿಸೋದು.
ಸುಮ್ಮನೆ ವಿಷ್ಣುಪುರಾಣದ ಏಳನೆ ಅಧ್ಯಾಯ ನೋಡಿ. ಧರ್ಮವನ್ನು ವರಿಸಿದ ಶ್ರದ್ಧೆಗೆ ಕಾಮವು ಸಂತಾನವಂತೆ; ಧರ್ಮವನ್ನು ಮದುವೆಯಾದ ಲಕ್ಷ್ಮಿಗೆ ದರ್ಪವು ಪುತ್ರನಂತೆ! ಅರ್ಥ ಬಲು ಸ್ಪಷ್ಟ. ಧರ್ಮ ಮಾರ್ಗದಲ್ಲಿ ನಡೆಯುವ ಶ್ರದ್ಧಾವಂತನ ಕಾಮನೆಗಳು ಪೂರ್ಣಗೊಳ್ಳುತ್ತವೆ. ಹಾಗೆಯೇ ಲಕ್ಷ್ಮಿ, ಧರ್ಮ ಮಾರ್ಗದಲ್ಲಿರುವವರಿಗೂ ದರ್ಪ ತರಿಸುತ್ತಾಳೆ. ಆದ್ದರಿಂದ ಎಚ್ಚರವಾಗಿರಬೇಕು ಎಂದು. ಧರ್ಮಕ್ಕೆ, ಶ್ರದ್ಧೆಗೆಲ್ಲ ಇಲ್ಲಿ ರೂಪವನ್ನು ಆರೋಪಿಸಿರುವುದು ಕೇಳುಗರಿಗೆ ಸದಾ ನೆನಪಿರಲಿ ಮತ್ತು ಅರ್ಥೈಸಿಕೊಳ್ಳಲು ಸುಲಭವಿರಲಿ ಎಂಬ ಕಾರಣದಿಂದಷ್ಟೇ. ಮುಂದೆ ಕಲೆಗಾರರು ಇದಕ್ಕೆ ಚಿತ್ರ ಬರೆದು, ಹಾಡುಗಾರ ಹಾಡು ಕಟ್ಟಿ ಹಾಡಿಬಿಟ್ಟರೆ ಮತ್ತೊಬ್ಬ ದೇವರು ಸೃಷ್ಟಿಯಾದಂತೆ. ಆದರೆ ವಾಸ್ತವದಲ್ಲಿ ಪ್ರತಿಯೊಬ್ಬ ದೇವರೂ ಇಂತಹದೇ ತತ್ತ್ವವೊಂದರ ವ್ಯಕ್ತ ರೂಪ. ಜ್ಞಾನ ಅನ್ನೋದಕ್ಕೆ ಸರಸ್ವತಿಯ ರೂಪ ಕೊಟ್ಟರು. ಆಕೆಯ ಕೈಲಿ ಜಪಮಣಿ, ಪುಸ್ತಕವಿಟ್ಟು ಬಂಡೆಗಲ್ಲಿನ ಮೇಲೆ ಕೂರಿಸಿದರು. ಜ್ಞಾನ ಸಂಪಾದನೆಗೆ ದೇಹ ಸುಖ ತ್ಯಾಗ ಮಾಡಬೇಕೆಂಬ ಕಲ್ಪನೆ ಅದು. ಎಲ್ಲ ಸೃಷ್ಟಿಯ ಮೂಲ ಸತ್ವಕ್ಕೆ ನಾರಾಯಣನ ರೂಪ ಕೊಟ್ಟರು. ಸೃಷ್ಟಿಯೇ ಅವನದ್ದಿರುವಾಗ ಇನ್ನು ಸಂಪತ್ತು – ಕೀರ್ತಿ ಎಲ್ಲವೂ ಅವನ ಕಾಲಬುಡದಲ್ಲಿಯೇ ತಾನೆ? ಅದಕ್ಕೆಂದೇ ಲಕ್ಷ್ಮಿಗೆ ನಾರಾಯಣನ ಪಾದಗಳ ಬಳಿ ಜಾಗವಾಯ್ತು.
ನಾವು ಕಲಾವಿದ ಚಿತ್ರಿಸಿದ ರೂಪವನ್ನು ಬಿಗಿಯಾಗಿ ಹಿಡಿದುಕೊಂಡೆವು; ವೇದಗಳು ಹೇಳಿದ ಸೃಷ್ಟಿ ತತ್ತ್ವವನ್ನು ನಮಗೆ ಅರ್ಥ ಮಾಡಿಸಲು ಹೆಣೆಯಲಾದ ಲೌಕಿಕ ಕಥೆಗಳನ್ನು ನೆಚ್ಚಿಕೊಂಡೆವು. ಮೂಲ ತತ್ತ್ವವನ್ನೆ ಮರೆತುಬಿಟ್ಟೆವು. ಹೀಗಾಗಿಯೇ ಅನೇಕ ಗೊಂದಲಗಳು ಸೃಷ್ಟಿಯಾದವು. ಈ ಗೊಂದಲಗಳ ಲಾಭವನ್ನು ಆಕ್ರಮಣಕಾರರಾಗಿ ಬಂದ ಮುಸಲ್ಮಾನರು ಮತ್ತು ಕ್ರಿಶ್ಚಿಯನ್ನರು ಪಡೆದುಕೊಂಡರು ಅಷ್ಟೇ. ಆದರೆ ಈಗಲೂ ಸೃಷ್ಟಿ ರಚನೆಯ ವಿಜ್ಞಾನ ಅರಿಯಲು ಪ್ರಯತ್ನಿಸುವ ಪ್ರತಿಯೊಬ್ಬ ವಿಜ್ಞಾನಿಯೂ ಭಾರತೀಯ ಸಾಹಿತ್ಯಗಳಲ್ಲಿ ಹುದುಗಿ, ಹಾಸುಹೊಕ್ಕಾಗಿರುವ ತತ್ತ್ವಸಾರವನ್ನು ಗ್ರಹಿಸಿ ಹುಬ್ಬೇರಿಸುತ್ತಾನೆ.
ಯಾವುದನ್ನೂ ಆಧಾರವಿಲ್ಲದೆ ಹೇಳುತ್ತಲೇ ಇಲ್ಲ. ಕೆಲವು ವರ್ಷಗಳ ಹಿಂದೆ ದೇವಕಣದ ಬಗ್ಗೆ ಚರ್ಚೆ ವ್ಯಾಪಕವಾಗಿ ನಡೆದಿದ್ದು ನಿಮಗೆಲ್ಲ ನೆನಪಿರಬೇಕಲ್ಲ? ಅದಕ್ಕೆ ಪೂರಕವಾದ ಪ್ರಯೋಗ ನಡೆದ ಸ್ಥಳ ಸಿಇಆರ್‍ಎನ್ (ಯುರೋಪಿಯನ್ ಸೆಂಟರ್ ಫಾರ್ ನ್ಯೂಕ್ಲಿಯಾರ್ ರಿಸರ್ಚ್) ನ ಹೊರಗೆ 2003 – 2004ರಲ್ಲಿ ಭಾರತ ಸರ್ಕಾರ ಕೊಡುಗೆಯಾಗಿ ಕೊಟ್ಟ ಎರಡು ಮೀಟರ್ ಎತ್ತರದ ನಟರಾಜ ವಿಗ್ರಹ ಇಡಲಾಗಿದೆ. ನಮಗೆ ನಟರಾಜನ ಆ ವಿಗ್ರಹ ಬೇರೆಲ್ಲ ಮೂರ್ತಿಗಳಂತೆ ಸಾಮಾನ್ಯ. ಆದರೆ ವಿಜ್ಞಾನಿಗಳು ಅದರ ಹಿಂದಿನ ತತ್ತ್ವವನ್ನು ಅರಿತು ಅಚ್ಚರಿಯಿಂದ ದಿಟ್ಟಿಸುತ್ತಾರೆ.
ಫ್ರಿಟ್ಜೋ ಕಾಪ್ರಾ ಎನ್ನುವ ಭೌತ ವಿಜ್ಞಾನಿಯಂತೂ ತನ್ನ `ತಾವೋ ಆಫ್ ಫಿಸಿಕ್ಸ್’ ಕರತಿಯ ಒಂದಿಡೀ ಅಧ್ಯಾಯವನ್ನು ನಟರಾಜನ ನೃತ್ಯಕ್ಕೆ ಮೀಸಲಾಗಿಟ್ಟಿದ್ದಾನೆ. ಕ್ವಾಂಟಂ ಫಿಸಿಕ್ಸ್ ಶಾಖೆ ಬೆಳೆದಂತೆಲ್ಲ ವಿಜ್ಞಾನ ಅಣುವಿನೊಳಗೆ ಭಿನ್ನಭಿನ್ನ  ಕಣಗಳು ಪ್ರತಿಕ್ಷಣವೂ ನರ್ತಿಸುವುದನ್ನು ಗಮನಿಸಿದವು. ಭೌತ ವಿಜ್ಞಾನಿಗಳು ಇದನ್ನು ನರ್ತನಕ್ಕೆ ಹೋಲಿಸಿ ಭಾರತೀಯರು ಇದನ್ನೇ ನಟರಾಜನ ನರ್ತನದ ರೂಪದಲ್ಲಿ ಚಿತ್ರಿಸಿರುವುದನ್ನು ಗುರುತಿಸಿದರು.
ಅದಕ್ಕೂ ಹಿಂದೆಯೇ ಭೂಗರ್ಭ ಶಾಸ್ತ್ರಜ್ಞ ಮತ್ತು ಭಾರತೀಯ ದರ್ಶನಗಳ ಮೇಲೆ ವಿಸ್ತøತ ಪ್ರಬಂಧ ಬರೆದ ಆನಂದ ಕುಮಾರಸ್ವಾಮಿ ನಟರಾಜನ ಕುರಿತು ಸಂಶೋಧನಾ ಲೇಖನ ಬರೆದಿದ್ದರು. ಅವರು ಶಿವನ ಮೂರು ಬಗೆಯ ನೃತ್ಯಗಳ ಉಲ್ಲೇಖ ಮಾಡಿದ್ದರು – “ಶೂಲಪಾಣಿಯಾಗಿ ಸರಸ್ವತಿಯ ವೀಣೆಗೆ, ಇಂದ್ರನ ಕೊಳಲಿಗೆ, ಲಕ್ಷ್ಮಿಯ ಹಾಡಿಗೆ ದೇವ –ದೇವಿ – ಅಪ್ಸರೆಯರ ಮುಂದೆ ಕೈಲಾಸದಲ್ಲಿ ನಡೆಯುವ ನೃತ್ಯ ಒಂದಾದರೆ, ನಾಶದ ಮುನ್ಸೂಚನೆ ಕೊಟ್ಟು ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುವ ತಾಂಡವ ನೃತ್ಯ ಮತ್ತೊಂದು. ಮೂರನೆಯದು – ತಮಿಳುನಾಡಿನ ಚಿದಂಬರಂನಲ್ಲಿ ಆತ ನಡೆಸುವ ನಟರಾಜ ನರ್ತನ”
ನಟರಾಜ ಮಂದಿರದ ಸ್ಥಳ ಪುರಾಣ ಚಿದಂಬರ ಕ್ಷೇತ್ರವನ್ನು ವಿಶ್ವದ ಕೇಂದ್ರವೆನ್ನುತ್ತದೆ. ಈ ಮಾಹಿತಿಯನ್ನು ಮೂರ್ಖತನದ ಕಲ್ಪನೆಯೆಂದು ಜರೆಯೋಣವೆಂದರೆ, ಈ ದೇಶದ ಇನ್ಯಾವ ಮಂದಿರದ ಐತಿಹ್ಯವೂ ತಮ್ಮ ಸ್ಥಳವನ್ನು ಹೀಗೆ ಕರೆದುಕೊಳ್ಳುವುದಿಲ್ಲ. ಅಂದಮೇಲೆ, ಹೀಗೆ ಹೇಳುವಲ್ಲಿ ಒಂದಷ್ಟಾದರೂ ಸತ್ಯವಿರಲೇಬೇಕಲ್ಲ!
ಭೂಮಿಯ ಆಯಸ್ಕಾಂತೀಯ ಶಕ್ತಿಯ ಆಧಾರದ ಮೇಲೆ ಅಕ್ಷಾಂಶ – ರೇಖಾಂಶಗಳನ್ನು ಎಳೆದರೆ ಸಮಭಾಜಕ ರೇಖೆ ಈ ಸ್ಥಳದ ಮೂಲಕ ಹಾಯುತ್ತದೆ ಎಂಬುದನ್ನು ಸಿದ್ಧಪಡಿಸಿ ತೋರಲಾಗಿದೆ. ಹೀಗಾಗಿಯೇ ಶಿವ ಈ ಸ್ಥಳವನ್ನು ಸೃಷ್ಟಿಯ ಕಾರ್ಯಕ್ಷೇತ್ರವನ್ನಾಗಿ ಆಯ್ದುಕೊಂಡ, ಲಯ ಕಾರ್ಯಕ್ಕೂ ಇದನ್ನೇ ಕ್ಷೇತ್ರವಾಗಿ ಮಾಡಿಕೊಂಡ. “ಈ ನೃತ್ಯ ಶಿವನ ಐದು ಚಟುವಟಿಕೆಗಳನ್ನು ದಾಖಲಿಸುತ್ತದೆ. ಸೃಷ್ಟಿ, ಸ್ಥಿತಿ, ಲಯ, ಸಾಕಾರ ಮತ್ತು ಮುಕ್ತಿ. ಢಮರುವಿನಿಂದ ಸೃಷ್ಟಿಯಾಗುತ್ತದೆ. ಅಭಯ ಮುದ್ರೆಯಿಂದ ರಕ್ಷಣೆ; ಉರಿವ ಬೆಂಕಿಯಿಂದ ನಾಶ. ಮೇಲೆತ್ತಿ ನಿಂತ ಕಾಲು ನೆಮ್ಮದಿಯ ಸಂಕೇತವಾದರೆ, ಕೆಳಮುಖವಾಗಿರುವ ಕೈ ಆತ್ಮ ಮೋಕ್ಷದ ದ್ಯೋತಕ” – ಹಾಗೆಂದು ಕುಮಾರಸ್ವಾಮಿ ಅಭಿಪ್ರಾಯ ಪಡುತ್ತಾರೆ.
ನಮ್ಮ ವಾಸ್ತವ ಕಲ್ಪನೆಯೂ ಹಾಗೆಯೇ. ಬ್ರಹ್ಮನ ಹಗಲು ಕಳೆದು ರಾತ್ರಿಯಾದಾಗ ಬ್ರಹ್ಮ ನಿದ್ರೆಗೆ ಜಾರುತ್ತಾನಲ್ಲ, ಆಗ ಸೃಷ್ಟಿ ಜಡತ್ವಕ್ಕೆ ಹೋಗಿಬಿಡುತ್ತದೆ. ಆಗ ಡಮರು ನಿನಾದದಿಂದ ಮತ್ತೆ ಜಗತ್ತನ್ನು ಜಾಗೃತಾವಸ್ಥೆಗೆ ತಂದು ಸೃಷ್ಟಿ ಕಾರ್ಯಕ್ಕೆ ಪ್ರೇರಣೆ ಕೊಡುವವ ಶಿವನಂತೆ. ಹಾಗೆಂದು ಪುರಾಣಗಳ ಅಭಿಮತ. ಆತನ ನರ್ತನ ಶುರುವಾಗುತ್ತಿದ್ದಂತೆ ಜಗವೆಲ್ಲ ನರ್ತಿಸಲು ಶುರು ಮಾಡುತ್ತದೆಂಬುದು ನಮಗೆ ನಗು ತರಿಸುವ ಕಥೆಯೆನಿಸಿದರರೆ, ಭೌತ ವಿಜ್ಞಾನಿಗಳಿಗೆ ಅದು ಪರಮಾಣುಗಳಲ್ಲಿ ನಡೆಯುತ್ತಿರುವ ಎಲೆಕ್ಟ್ರಾನುಗಳ ಚಲನೆಯ ರುದ್ರ ನರ್ತನ!
ಫ್ರಿಟ್ಜೋ ಕಾಪ್ರಾನಂತೂ ನಟರಾಜನ ಸಮತೂಕದ ಭಂಗಿಯನ್ನು ಸೃಷ್ಟಿ ಮತ್ತು ಲಯದ ಸಮತೋಲನವೆಂದು ಕರೆದಿದ್ದಲ್ಲದೆ, ಮುಖ ಭಾವದ ಶಾಂತತೆಯನ್ನು ಸೃಷ್ಟಿ – ಲಯ ಮೀರಿದ ಅವಸ್ಥೆ ಎಂದಿದ್ದಾನೆ.
ಆಧುನಿಕ ಭೌತ ವಿಜ್ಞಾನದ ಪ್ರಕಾರ ಹುಟ್ಟು – ಸಾವುಗಳು ಜೀವ ಇರುವವುಗಳಿಗಷ್ಟೇ ಅಲ್ಲ, ನಿರ್ಜೀವ ವಸ್ತುಗಳಿಗೂ ಇವೆ. ಪ್ರತಿಯೊಂದು ಪರಮಾಣುವೂ ಗುರುತಿಗೆ ನಿಲುಕದ ಒಂದಷ್ಟು ಕಣಗಳ ಹುಟ್ಟು ಸಾವಿನೊಂದಿಗೇ ಇತರ ಪರಮಾಣುವಿನೊಂದಿಗೆ ಬೆಸೆದುಕೊಂಡಿವೆ. ಪ್ರತಿಯೊಂದು ಅಣುವಿನೊಳಗಿನ ಈ ಸೃಷ್ಟಿ ಲಯದ ನಿರಂತರ ಕ್ರಿಯೆಯೇ ನಟರಾಜನ ನಾಟ್ಯ ಎಂದು ಕಾಪ್ರಾ ಸ್ಪಷ್ಟವಾಗಿ ದಾಖಲಿಸುತ್ತಾನೆ. ಹೀಗಾಗಿ ಆತ ಇದನ್ನು ನಟರಾಜನ ನೃತ್ಯವೆಂದು ಕರೆಯದೆ ವಿಶ್ವಚೇತನದ ನೃತ್ಯವೆಂದು ಸಂಬೋಧಿಸುತ್ತಾನೆ.
ನಟರಾಜನಿಗೆ ಸಂಬಂಧಪಟ್ಟ ಈ ವಿವರಣೆಗಳೆಲ್ಲವನ್ನೂ ಸಿಇಆರ್‍ಎನ್‍ನ ಪ್ರಯೋಗಶಾಲೆಯ ಹೊರಗಿನ ಮೂರ್ತಿಯೆದುರಿಗೆ ಫಲಕದಲ್ಲಿ ದಾಖಲಿಸಲಾಗಿದೆ. ನಮಗೆ ಅದು ಬರಿಯ ವಿಗ್ರಹವಾಗಿರಬಹುದು; ದೇವ ಕಣದ ಹುಡುಕಾಟದಲ್ಲಿರುವ ವಿಜ್ಞಾನಿಗಳಿಗೆ ಅದರೊಳಗೆ ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್, ಫೋಟಾನುಗಳೆಲ್ಲ ಆಕರ್ಷಣೆಗೊಳಗಾಗಿ ನರ್ತಿಸುವುದು ಕಾಣುತ್ತದೆ. ಹಾಗೆ ನೋಡಿದರೆ ಆ ಮೂರ್ತಿಯನ್ನು ಅನುಸರಿಸಿ ಋಗ್ವೇದದ ಆಳಕ್ಕೆ ಹೋದವರು ಆ ವಿಜ್ಞಾನಿಗಳೇ, ನಾವಲ್ಲ. ನಾವಿಲ್ಲಿ ಶಿವ – ವಿಷ್ಣು ಇಬ್ಬರಲ್ಲಿ ಯಾರು ದೊಡ್ಡವರೆಂದು ಕಿತ್ತಾಡುತ್ತಾ ಕುಳಿತಿದ್ದೇವೆ.
ನನಗೆ ವಿಷಯದ ಆಳಕ್ಕೆ ಇಳಿದಂತೆಲ್ಲ ಅಚ್ಚರಿಯೂ, ಬೇಸರವೂ ಜೊತೆಜೊತೆಗೇ ಆಗುತ್ತದೆ. ಸಂಕೇತ ಭಾಷೆಯನ್ನು ಹುಟ್ಟುಹಾಕಿ ಸತ್ಯವನ್ನು ಕವಚದೊಳಗೆ ಹುದುಗಿಸಿಡುವಲ್ಲಿ ನಿಸ್ಸೀಮರಾಗಿದ್ದ ನಾವೇ ಕವಚ ಭೇದಿಸುವಲ್ಲಿ ಸೋತು ಹೋದೆವಲ್ಲ! ನಮ್ಮ ಹಿರಿಯರ ವೈಜ್ಞಾನಿಕ ಮನೋಭಾವನೆಯನ್ನು ಅರಿಯಲಾಗದೆ ತೊಳಲಾಡುತ್ತಿದ್ದೇವಲ್ಲ, ಛೇ!
ನಮ್ಮ ಸಾಹಿತ್ಯಗಳ ಪ್ರಕಾರ ಪಂಚಭೂತಗಳ ಶಕ್ತಿ ಆವಾಹನೆಗೆ ಐದು ದೇವಸ್ಥಾನಗಳು. ಜಲ ತತ್ತ್ವಕ್ಕೆ ತಿರುವಣ್ಣೈ ಕೋಯಲ್, ಅಗ್ನಿಗೆ ತಿರುವಣ್ಣಾಮಲೈ, ವಾಯುವಿಗೆ ಕಾಳಹಸ್ತಿ, ಪೃಥ್ವಿಗೆ ಕಾಂಚೀಪುರಂ ಮತ್ತು ಆಕಾಶಕ್ಕೆ ಚಿದಂಬರ. ಇಷ್ಟಕ್ಕೂ ಚಿದಂಬರ ಎಂದರೆ ಚಿತ್ತದ ಆಕಾಶ ಎಂದೇ ಅರ್ಥ. ಚಿತ್ತ ಎನ್ನುವುದು ಮನಸ್ಸಿಗಿಂತಲೂ ಆಳದ, ವಿಶ್ವದ ಎಲ್ಲ ಆಗುಹೋಗುಗಳನ್ನೂ ದಾಖಲಿಸುವ ನಮ್ಮೊಳಗಿನ ಕಾಲ್ಪನಿಕ ವಸ್ತು. ಅದನ್ನು ಪಂಚಭೂತಗಳಿಂದ ಸಾಕ್ಷಾತ್ಕರಿಸಿಕೊಳ್ಳಲಾಗದು. ಆದರೆ ಅನುಭವಿಸಬಹುದು, ಅಷ್ಟೇ. ದ್ವಂದ್ವ, ಏಳುಬೀಳುಗಳಿಲ್ಲದ ಈ ಚಿತ್ತಾಕಾಶದಲ್ಲಿ ನಟರಾಜ ನರ್ತಿಸಲಾರಂಭಿಸಿದರೆ ಅದು ಪರಮಾನಂದವೇ. ಅದರ ಸಂಕೇತವೇ ಚಿದಂಬರಂ ಮಂದಿರ. ಅಂದಹಾಗೆ, ಹುಬ್ಬೇರಿಸುವಂಥ ಮತ್ತೊಂದು ವಿಷಯ ಏನು ಗೊತ್ತಾ? ಕಾಂಚೀಪುರ, ಕಾಳಹಸ್ತಿ, ಚಿದಂಬರ – ಈ ಮೂರೂ ಮಂದಿರಗಳೂ ಆಯಸ್ಕಾಂತೀಯ ಸಮಭಾಜಕ ರೇಖೆಯ ಮೇಲೇ ನಿರ್ಮಾಣಗೊಂಡಿರೋದು!
ಹೌದು. ವಿಜ್ಞಾನಕ್ಕೂ ನಿಲುಕದ ಇನ್ನೂ ಯಾವುದೋ ಸಂಗತಿ ನಿಗೂಢವಾಗಿ ಅಡಗಿ ಕುಳಿತಿದೆ. ಅದೇ ಚಿದಂಬರ ರಹಸ್ಯ.

Comments