ಆಲೋಚನೆಗಳ ಹಿಂದಿನ ಚಿತ್ತ ವಿಚಿತ್ರ

ನಾನು ಖಂಡಿತವಾಗಿ ವಿಜ್ಞಾನದ ವಿರೋಧಿಯಲ್ಲ. ಆದರೆ ಎಲ್ಲ ಪ್ರಶ್ನೆಗೂ ಭೌತಿಕ ವಿಜ್ಞಾನ ಉತ್ತರಿಸಬಲ್ಲದು ಎಂಬುದನ್ನು ಒಪ್ಪಲಾರೆ ಅಷ್ಟೇ. ಮತ್ತೆ ಮತ್ತೆ ಒತ್ತಿ ಹೇಳುತ್ತೇನೆ; ಯಾವ ಪ್ರಶ್ನೆಗೆ ವಿಜ್ಞಾನ ಉತ್ತರಿಸುವುದನ್ನು ನಿಲ್ಲಿಸುವುದೋ, ಅಲ್ಲಿಂದಾಚೆಗೆ ಅಧ್ಯಾತ್ಮ ಶುರುವಾಗುತ್ತದೆ.
ಸುಮ್ಮನೆ ಚರ್ಚೆ ಯಾಕೆ? ಸೈನಿಕರಾಗಿದ್ದ ಹಜಾರೆ, ಜೀವನದಲ್ಲಿ ನೊಂದು ಬೆಂದು ಆತ್ಮಹತ್ಯೆಯ ತಯಾರಿಯಲ್ಲಿದ್ದಾಗ ವಿವೇಕಾನಂದರ ಮಾತಿನ ಸಾಲುಗಳಿಂದ ಪ್ರಭಾವಿತರಾಗಿ ಬದುಕು ಬದಲಿಸಿಕೊಂಡರು – ಹಾಗಂತೆ ಓದಿದ್ದೇವೆ, ಅಣ್ಣಾ ಬಾಯಿಂದಲೂ ಕೇಳಿದ್ದೇವೆ. ಈಗ ಹೇಳಿ. ಅಣ್ಣಾ ವಿವೇಕಾನಂದರಿಂದ ಪ್ರಭಾವಿತರಾದ ದಿನ ವೈಜ್ಞಾನಿಕವಾಗಿ ಆದದ್ದೇನು? ಅಣ್ಣಾ ದೇಹದಲ್ಲಿ ಆಮ್ಲಜನಕ ಹೆಚ್ಚಾಯ್ತೆ? ಜಲಜನಕವೋ? ಪ್ರಭಾವವಾಗಿದ್ದು ಇಂದ್ರಿಯಗಳ ಮೇಲೋ, ದೇಹದ ಮೇಲೋ, ರಕ್ತ – ಮೂಳೆ, ಮಾಂಸಗಳ ಮೇಲೋ? ಮನಸ್ಸು ಅಂದೀರಿ ಜೋಕೆ! ಅದು ಕಣ್ಣಿಗೆ ಕಾಣದಿರುವುದರಿಂದ ಮೂಸಿ ನೋಡಲು, ಸ್ಪಶರ್ಿಸಲು ಸಾಧ್ಯವಿಲ್ಲದಿರುವುದರಿಂದ ವೈಜ್ಞಾನಿಕವಾಗಿ ಅದು ಇಲ್ಲ! ಅದು ಬಿಡಿ. ತೂಕ ನೋಡುವ ಯಂತ್ರದಲ್ಲಿ ನಿಮ್ಮ ದೇಹದ ತೂಕ ಲೆಕ್ಕ ಹಾಕಿ. ಈಗ ಮನಮೋಹಿಸುವ ಹಾಡೊಂದನ್ನು ಕೇಳಿ. ಐದಾರು ನಿಮಿಷ ಮೈಮರೆತ ನೀವು ಯಾವುದೋ ಲೋಕದಲ್ಲಿ ತೇಲಾಡಿಬಿಡುತ್ತೀರಿ. ಈಗ ಮತ್ತೆ ನಿಮ್ಮ ತೂಕ ಲೆಕ್ಕ ಹಾಕಿ. ಬದಲಾಗುವುದೇನು? ನಿಮ್ಮ ದೇಹದಲ್ಲಿನ ರಕ್ತ, ಮೂಳೆ, ಮಾಂಸಗಳ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬರುವುದೇನು? ಮತ್ತೆ ಐದಾರು ನಿಮಿಷಗಳಲ್ಲಿ ನಿಮ್ಮೊಳಗೆ ಬದಲಾವಣೆಯಾಗಿದ್ದು ವಾಸ್ತವವಾಗಿ ಏನದು? ಹಾ! ಸರಿಯಾಗಿ ಯೋಚಿಸಿದರಿ. ಇಲ್ಲಿಂದಾಚೆಗೇ ಅಧ್ಯಾತ್ಮದ ಪರಿಧಿ.086ea18ಪಂಚೇಂದ್ರಿಯಗಳ ಸಾಮರ್ಥ್ಯಕ್ಕೆ ನಿಲುಕದ ಅನೇಕ ಸಂಗತಿಗಳು ನಿತ್ಯವೂ ನಮ್ಮೆದುರಿಗೆ ನಡೆದೇ ಇರುತ್ತವೆ. ಅವುಗಳನ್ನು ಗಮನಿಸುವಲ್ಲಿ ನಾವು ಎಡವುತ್ತೇವೆ ಅಷ್ಟೆ. ವಾಸ್ತವವಾಗಿ ನಮ್ಮಲ್ಲಿ ಆಲೋಚನೆಗಳು ಹುಟ್ಟುತ್ತವಲ್ಲ, ಅದಾದಮೇಲೆ ಮೆದುಳಿನ ಯಾವಯಾವ ಭಾಗದಲ್ಲಿ ಯಾವಯಾವ ಬಗೆಯ ಕ್ರಿಯೆಗಳು ಜರುಗುತ್ತವೆಂಬ ವಿಸ್ತಾರವಾದ ಅಧ್ಯಯನವನ್ನು ಮಾಡಿದ್ದಾರೆ. ಆದರೆ ಮೂಲಭೂತವಾದ ಆಲೋಚನೆಗಳು ಹೇಗೆ ಹುಟ್ಟುತ್ತವೆ ಎಂಬ ಪ್ರಶ್ನೆಗೆ ಉತ್ತರವೇ ಇಲ್ಲ.
ವಿಜ್ಞಾನಿಗಳು ಇನ್ನೂ ತಿಣುಕಾಡುತ್ತಿದ್ದಾರೆ. ಹಾಗೇ ಸುಮ್ಮನೆ ಒಮ್ಮೆ ಕಣ್ಮುಚ್ಚಿ ಕುಳಿತು ನೋಡಿ. ಬಗೆಬಗೆಯ ಆಲೋಚನೆಯ ಬುಗ್ಗೆಗಳು ನಿಮ್ಮೊಳಗೆ ಏಳುವುದನ್ನು ಗಮನಿಸಿ. ಎಲ್ಲಿ ಅಡಗಿಕೊಂಡಿದ್ದವು ಅವು? ಒಳಿತು, ಕೆಡುಕು, ಅತಿ ಕೆಡುಕು ಎಲ್ಲ ಬಗೆಯ ಚಿಂತನಾತರಂಗಗಳ ಪ್ರವಾಹ. ಅವುಗಳಿಗೆ ಹೀಗೇ ಉತ್ಪಾದನೆಯಾಗಬೇಕೆಂಬ ಕ್ರಮವಿಲ್ಲ. ಮೇಲ್ನೋಟಕ್ಕೆ ಕಾಣುವ ನಿಮ್ಮ ವ್ಯಕ್ತಿತವಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಮತ್ತೆ ಈ ಚಿಂತನೆಗಳ ಉತ್ಪಾದನೆಯ ಕಾರ್ಖಾನೆ ಅದಾವುದು? ಈ ಚರ್ಚೆ ಅದೇಕೆ ಮುಖ್ಯವೆಂದರೆ, ಈ ಕಾರ್ಖಾನೆಯ ಉತ್ಪನ್ನದ ಗುಣಮಟ್ಟದ ಆಧಾರದ ಮೇಲೆಯೇ, ವ್ಯಕ್ತಿಯ ಗುಣಮಟ್ಟ ನಿರ್ಧಾರವಾಗುತ್ತದೆ.

ನೀವು ಯಾವಾಗಲಾದರೂ ‘ಚಿತ್ತ’ ಎನ್ನು ಪದವನ್ನು ಕೇಳಿದ್ದೀರಾ? ಇದು ಮನಸಿಗಿಂತ ಸ್ವಲ್ಪ ಸೂಕ್ಷ್ಮವಾದುದು. ಆಲೋಚನೆಗಳು ಹುಟ್ಟುವ ಮತ್ತು ಪರ್ಯವಸಾನಗೊಳ್ಳುವ ತಾಣವಿದು. ಚಿತ್ತ ಒಂದು ರೀತಿ ಸಿಡಿ ತಟ್ಟೆಯಿದ್ದಂತೆ. ಅದು ಹಿಂದಿನ ಜನ್ಮಗಳಿಂದ ಬಂದ ಅನುಭವದ ಎಲ್ಲ ಅಂಶಗಳನ್ನು ದಾಖಲಿಸಿಟ್ಟುಕೊಂಡಿದೆ. ಅಷ್ಟೇ ಅಲ್ಲ, ಈಗಿನ ಸಂಗತಿಗಳನ್ನೂ ದಾಖಲಿಸುತ್ತಲೇ ಹೋಗುತ್ತದೆ. ಕಂಪ್ಯೂಟರಿನ ದೃಷ್ಟಿಯಿಂದ ಇದು ‘ರೀಡ್ ಓನ್ಲಿ ಮೆಮೊರಿ’ಯಂತೆ. ಇಲ್ಲಿ ದಾಖಲು ಮಾಡಬಹುದು, ದಾಖಲಾಗಿದ್ದನ್ನು ಓದಬಹುದು, ಆದರೆ ಅಳಿಸುವುದು ಸಾಧ್ಯವಿಲ್ಲ. ಇದಕ್ಕಿಂತಲೂ ಸ್ಥೂಲಮಟ್ಟದ ಮನಸ್ಸು ಇಲ್ಲಿ ದಾಖಲಾಗಿದ್ದನ್ನು ಓದುತ್ತದೆ. ಮೆದುಳಿಗೆ ಮುಟ್ಟಿಸುವ ಕೆಲಸ ಮಾಡುತ್ತದೆ. ಇಲ್ಲಿ ಮನಸ್ಸು ರ್ಯಾಂಡಮ್ ಅಕ್ಷೆಸ್ ಮೆಮೊರಿ ಇದ್ದಂತೆ. ಅದು ಬರೆಸಿಕೊಂಡಷ್ಟೆ ವೇಗವಾಗಿ ಅಳಿಸಿಕೊಂಡೂ ಬಿಡುತ್ತದೆ. ಅದಕ್ಕೇ ನಮ್ಮ ಪೂರ್ವಜರು ಈ ಮನಸ್ಸನ್ನು ಚಂಚಲ ಎಂದಿದ್ದು, ಮರ್ಕಟಕ್ಕೆ ಹೋಲಿಸಿದ್ದು.
ಹೀಗೆ ಮನಸ್ಸು ಚಿತ್ತದ ಬತ್ತಳಿಕೆಯಿಂದ ಬಾಣಗಳನ್ನು ಮೊಗೆಮೊಗೆದು ಹುಚ್ಚಾಪಟ್ಟೆ ಮೆದುಳಿನತ್ತ ಎಸೆಯುತ್ತಿದ್ದರೆ ಪಂಚೇಂದ್ರಿಯಗಳು ಅದಕ್ಕೆ ಪೂರಕವಾಗಿ ಚಟುವಟಿಕೆಗಳನ್ನು ಹೊರಜಗತ್ತಿನಲ್ಲಿ ಮಾಡುತ್ತ ಹೋಗುತ್ತವೆ. ಮತ್ತೆ ಈ ಕ್ರಿಯೆಗಳೆಲ್ಲ ಚಿತ್ತದಲ್ಲಿ ಅಚ್ಚೊತ್ತಿಕೊಳ್ಳುತ್ತವೆ. ಇವು ಮತ್ತಷ್ಟು ಆಲೋಚನೆಗಳಿಗೆ ಕಾರಣವಾಗುತ್ತವೆ. ಎಲ್ಲ ಆಧ್ಯಾತ್ಮಿಕ ಪ್ರವಚನಗಳೂ ಜನನ ಮರಣ ಚಕ್ರದಿಂದ ಪಾರಾಗುವ ಕುರಿತಂತೆ ಮಾತಾಡುತ್ತವಲ್ಲ, ಅದರಲ್ಲಿ ಚಿತ್ತದಲ್ಲಿ ದಾಖಲಾಗದಂತೆ ತಡೆಯುವುದೂ ಒಂದು! ಇದಕ್ಕಾಗಿಯೇ ಬಗೆಬಗೆಯ ಸಾಧನೆಗಳು ರೂಪುಗೊಂಡಿರೋದು. ಚಿತ್ತದಿಂದ ಉಮ್ಮಳಿಸಿದ ಚಿಂತನೆಯನ್ನು ಮನಸ್ಸು ಮೆದುಳಿನತ್ತ ಎಸೆಯುತ್ತಲ್ಲ, ಆಗ ನಾವು ಮಾಡುವ ಕೆಲಸವನ್ನು ಪ್ರಯತ್ನಪೂರ್ವಕವಾಗಿ ನಿಯಂತ್ರಿಸಿದರೆ ಅದು ಕರ್ಮಯೋಗವಾಗಿಬಿಡುತ್ತದೆ. ಆಲೋಚನೆಯ ಮೂಲವನ್ನು ಹುಡುಕುತ್ತ ಅದರ ವಿಶ್ಲೇಷಣೆಗೆ ನಿಂತರೆ, ಅದು ಜ್ಞಾನಯೋಗ. ಚಿಂತನೆಗಳು ಮನಸ್ಸಿಗೆ ಬರದಂತೆ ಮನಸ್ಸನ್ನು ಶೂನ್ಯವಾಗಿಸುವ ಪ್ರಯತ್ನವಿದೆಯಲ್ಲ, ಅದನ್ನು ಧ್ಯಾನದ ರಾಜಮಾರ್ಗ, ರಾಜಯೋಗ ಅಂತಾರೆ ಅಷ್ಟೆ.
ಮನಸ್ಸನ್ನು ನಿಯಂತ್ರಿಸೋದೇ ಎಲ್ಲ ಯೋಗದ ಮೂಲ. ಇನ್ನೂ ಸ್ಪಷ್ಟಪಡಿಸಬೇಕೆಂದರೆ, ಯೋಗ ‘ಚಿತ್ತವೃತ್ತಿಗಳ ನಿರೋಧ’. ಹಾಗಂತ ಹೇಳುತ್ತೆ ಪತಂಜಲಿಯ ಸೂತ್ರ. ಚಿತ್ತದಲ್ಲಿ ಬಗೆಬಗೆಯ ಬುಗ್ಗೆಗಳು ಏಳದಂತೆ ನೋಡಿಕೊಂಡರಾಯ್ತು. ಹಾಗಾಗಬೇಕೆಂದರೆ ಮನಸ್ಸು ಹಿಡಿತಕ್ಕೆ ಬರಲೇಬೇಕು. ಅದಕ್ಕೆ ಕಠೋಪನಿಷತ್ತಿನಲ್ಲಿ ಯಮ ನಚಿಕೇತನಿಗೆ ಹೇಳುವ ಬೋಧೆಯಲ್ಲಿ ದೇಹವೆಂಬ ರಥದ ಸಾರಥಿಯಾಗಿ ಬುದ್ಧಿಯನ್ನು ಸಂಕೇತಿಸಿದರೆ, ಮನಸ್ಸನ್ನು ಲಗಾಮಿನಂತೆ ಚಿತ್ರಿಸುತ್ತಾನೆ. ಅರ್ಥ ಬಲು ಸ್ಪಷ್ಟ. ಬುದ್ಧಿಯ ಅಡಿ ಮನಸ್ಸಿದ್ದರೆ ಬದುಕು ಸುಂದರ; ಮನಸ್ಸು ಹೇಳಿದಂತೆ ಬುದ್ಧಿ ಕೇಳಿದರೆ ಬಲು ದುರ್ಭರ.

ನೀವು ಜಗತ್ತಿನ ಯಾವ ಮತಪಂಥಗಳನ್ನೆ ಗಮನಿಸಿ, ಅವುಗಳ ಮೂಲ ವ್ಯತ್ಯಾಸ ಇರುವುದು ಚಿತ್ತದ ಅಲೆಗಳ ಬಿಂಬವಾದ ಮನಸ್ಸನ್ನು ಸಂಭಾಳಿಸುವ ರೀತಿಯಲ್ಲೇ. ಭಕ್ತಿ ಮಾರ್ಗದ ಮೂಲಕ ಮನಸ್ಸನ್ನು ಎತ್ತರಕ್ಕೇರಿಸುವ ಹಾದಿ ತೋರುತ್ತದೆ. ಇನ್ನೂ ಕೆಲವು ಪಂಥಗಳು ಭಗವಂತ – ಭಕ್ತರಲ್ಲಿ ಭೇದವೇ ಇಲ್ಲವೆನ್ನುತ್ತ ಉನ್ನತ ಆಲೋಚನೆಗಳಿಗೆ ಪ್ರೇರೇಪಿಸುತ್ತವೆ. ಈ ಮೂಲ ಸತ್ವವನ್ನು ಮರೆತವರು ತಾವು ಹಿಡಿದ ಹಾದಿಯೇ ಶ್ರೇಷ್ಠ ಎನ್ನು ಜಿದ್ದಿಗೆ ಬಿದ್ದರು.
ಬೇರೆ ಮಾರ್ಗದಲ್ಲಿದ್ದವರನ್ನು ಹೀಯಾಳಿಸಿದರು. ಕೆಲವು ಮತಗಳಂತೂ ತಾವು ಶ್ರೇಷ್ಠ ಎನ್ನುವುದಕ್ಕಾಗಿ ಇತರರನ್ನು ಕೊಲ್ಲುವುದಕ್ಕೂ ಹಿಂದೆ ಮುಂದೆ ನೋಡಲಿಲ್ಲ. ಜಗತ್ತನ್ನು ಆವರಿಸುತ್ತಿರುವ ಅನೇಕ ಪಂಥಗಳು ಇಂಥವೇ.
ಒಟ್ಟಾರೆಯಾಗಿ ಒಂದಂತೂ ಸತ್ಯ. ಎಲ್ಲ ಮತಗಳೂ ಹುಟ್ಟಿರೋದು ಆಯಾ ಮತಗಳ ಮೂಲ ಪುರುಷರ ಚಿಂತನೆಗಳ ಕಾರಣದಿಂದಾಗಿಯೇ. ಮತ್ತು ಈ ಚೀಮತನೆಗಳ ಮೂಲ ಸ್ರೋತ ಚಿತ್ತವೇ! ಈ ಚಿತ್ತ ಸದಾ ಕಾಲ ತನ್ನನ್ನು ಓದುವಂತೆ ಮನಸ್ಸಿಗೆ ಪ್ರಚೋದನೆ ಕೊಡುತ್ತಲೇ ಇರುತ್ತದೆ. ಆದರೆ ನಾವು ಎಚ್ಚರವಾಗಿದ್ದಾಗ, ಐದೂ ಇಂದ್ರಿಯಗಳೂ ಕೆಲಸ ಮಾಡುತ್ತವಾದ್ದರಿಂದ ಮನಸ್ಸು ಆಗ ಹೊರಗಣ ಕೃತಿಗಳನ್ನು ಚಿತ್ತದಲ್ಲಿ ದಾಖಲಿಸುತ್ತಿರುತ್ತದೆ. ಒಮ್ಮೆ ಕಣ್ಮುಚ್ಚಿ ಕುಳಿತೊಡನೆ ಹಳೆಯದ್ನು ಕೆದುಕಲು ಶುರು ಮಾಡುತ್ತದೆ. ಅದಕ್ಕೇ ನಿದ್ದೆಯಲ್ಲೂ ಸ್ವಪ್ನಗಳು ನಮ್ಮನ್ನು ಕಾಡೋದು. ಹೀಗೆ ಜಾಗೃತಾವಸ್ಥೆ ಮತ್ತ ಸ್ವಪ್ನವಸ್ಥೆಯಲ್ಲಿ ಕಂಡ ಸತ್ಯಗಳನ್ನು ಸಮಾಜಕ್ಕೆ ಮುಟ್ಟಿಸಿ ಕೆಲವರು ಪಂತಗಳನ್ನು ಸ್ಥಾಪಿಸಿದರೆ, ಭಾರತೀಯ ಋಷಿಗಳುಇವೆರಡನ್ನೂ ಮೀರಿ ಸುಷುಪ್ತಿಯ ಅವಸ್ಥೆಗೇರಿದರು. ಅಲ್ಲಿ ಮನಸ್ಸನ್ನು ಇಲ್ಲವಾಗಿಸಿ ಚಿತ್ತಾಕಾಶದಲ್ಲಿಯೇ ವಿಹರಿಸಿದರು. ಆಗ ಅವರಿಗೆ ಅನೇಖ ಶಾಶ್ವತ ಸತ್ಯಗಳು ಗೋಚರವಾದವು. ಅದನ್ನು ಸಮಾಝದ ಮುಂದಿರಿಸಿದರು. ಹೀಗೆ ಚಿತ್ತಾಕಾಶದೊಂದಿಗೆ ಒಂದಾದಾಗ ಗೋಚರಿಸಿದ ಸತ್ಯವಾದ್ದರಿಂದ, ಋಷಿಗಳು ಎಂದಿಗೂ ಮಂತ್ರಗಳನ್ನು ಕಂಡುಹಿಡಿದೆ ಎನ್ನಲಿಲ್ಲ, ಬದಲಿಗೆ ‘ದರ್ಶನವಾಯ್ತು’ ಎಂದರು. ಈ ದರ್ಶನದ ವೇಳೆಗೆ ಮನಸ್ಸು ಇಲ್ಲವಾಗಿದ್ದರಿಂದ, ಅಸ್ತಿತ್ವದ ಭಾವನೆಯೇ ಲಯವಾಗಿತ್ತು. ಹೀಗಾಗಿಯೇ ಅವರು ಕಂಡುಕೊಂಡ ಸತ್ಯಗಳ ಸಂಕಲನ ‘ವೇದ’ ಅಪೌರುಷೇಯವಾಯಿತು.

ಚಿತ್ತದಿಂದ ಹೊರಟ ಪ್ರತಿಯೊಂದು ಆಲೋಚನೆಗೂ ಅಪಾರವಾದ ಶಕ್ತಿ ಇದೆ. ಆಡಿದ ಮಾತಿಗಿಂತ ಹೆಚ್ಚು ಶಕ್ತಿಶಾಲಿ ಆಡದ ಆಲೋಚನೆಯೇ. ಸ್ವಾಮಿ ವಿವೇಕಾನಂದರಂತೂ ನೀವು ಗುಹೆಯೊಂದರಲ್ಲಿ ಕುಳಿತು ಬಲವಾದ ಚಿಂತನೆಯೊಂದನ್ನು ಹೊರಹಾಕಿ. ಅದು ಆ ಗುಹೆಯ ಗೋಡೆಗಳನ್ನೂ ಮುರಿದುಕೊಂಡು ಜಗತ್ತನ್ನು ಆವರಿಸುತ್ತದೆ ಎನ್ನುತ್ತಾರೆ. ಬಹುಶಃ ನಮ್ಮಿಂದ ಹೊರಬಿದ್ದ ಚಿಂತನೆ ವಿಜ್ಞಾನ ಇನ್ನೂ ಗುರುತಿಸಲಾಗದ ಯಾವುದೋ ಬಗೆಯ ವಿಕಿರಣವಿರಬೇಕು. ಅದು ವಿದ್ಯುತ್ ಕಿರಣಗಳಿಗಿಂತಲೂ ಕಾಂತೀಯ ಕಿರಣಗಳಿಗಿಂತಲೂ ಬಲಾಢ್ಯವಾದುದೇ ಆಗಿರಬೇಕು. ಮನಸ್ಸು ಎಷ್ಟು ಶುದ್ಧವೋ ಅಷ್ಟು ಗಟ್ಟಿಯಾದ ಆಲೋಚನೆ. ಆಲೋಚನೆ ಎಷ್ಟು ಗಟ್ಟಿಯೋ ಅಷ್ಟು ದೀರ್ಘಕಾಲ ಬಾಳಿಕೆ ಮತ್ತು ಸುದೀರ್ಘ ದೂರ ಪಯಣ ಅದರದ್ದು. ಹೀಗಾಗಿಯೇ ಉಪನಿಷತ್ ಕಾಲದ ಋಷಿ ಹೇಳಿದ ವಾಕ್ಯವೊಂದು ಜರ್ಮನಿಯ ತತ್ತ್ವಶಾಸ್ತ್ರಜ್ಞ ಶೋಫನ್ ಹೋವರ್ನನ್ನು ಅಲುಗಾಡಿಸಬಲ್ಲದು. ಹಾಗೆ ನೋಡಿದರೆ ನಮ್ಮ ಸುತ್ತಲೂ ಮೊಬೈಲ್ ಸಂದೇಶ ಹೊರುವ ಸಿಗ್ನಲ್ಗಳು ಎಷ್ಟಿವೆಯೋ ಅದ್ಕಿಂತಲೂ ಸಾವಿರಾರು ಹೆಚ್ಚುಪಟ್ಟು ಚಿಂತನೆಯ ತರಂಗಗಳು ಸುತ್ತುತ್ತಿವೆ. ಇದರಲ್ಲಿ ಋಷಿಗಳ ಕಾಲದ ಆಲೋಚನೆಗಳಿವೆ, ಆಧುನಿಕ ಸುಧಾರಕರ ಆಲೋಚನೆಗಳಿವೆ. ಕೊನೆಗೆ ನಮ್ಮ ಪರಿಚಿತರ, ಗುರುತೇ ಇಲ್ಲದವರ ಚಿಂತನೆಗಳೂ ಸೇರಿಕೊಂಡಿವೆ. ಮನಸ್ಸು, ಚಿತ್ತ ಮತ್ತು ಈ ಸಂಜ್ಞೆಗಳನ್ನು ಬೆಸೆದರೆ ನೀವು ಊಹಿಸಲೂ ಸಾಧ್ಯವಿಲ್ಲದ ಹೊಸಹೊಸ ಆಲೋಚನೆಗಳು ನಿಮ್ಮೊಳಗಿಂದ ಉಮ್ಮಳಿಸಿಬರುತ್ತವೆ. ಕೆಲವೊಮ್ಮ ಗಣಿತದ ಸಮಸ್ಯೆಗೆ ಪರಿಹಾರ ಸಿಗದೆ ತಿಣುಕಾಡುತ್ತಿರುವಾಗ ಇದ್ದಕ್ಕಿದ್ದಂತೆ ಉತ್ತರ ಹೊಳೆಯುವ ಐಂದ್ರಜಾಲಿಕ ಪ್ರಕ್ರಿಯೆ ಗಮನಿಸಿದ್ದೀರ? ಉತ್ತರ ಅದೆಲ್ಲಿತ್ತು? ಮತ್ತದು
ತತ್ ಕ್ಷಣಕ್ಕೆ ಹೊಳೆದದ್ದು ಯಾಕೆ ಎಂಬುದಕ್ಕೆ ಉತ್ತರ ಏಕಾಗ್ರಗೊಂಡ ಮನಸ್ಸು ಮಾತ್ರ.

ಇದೊಂದು ರೀತಿ ರೇಡಿಯೋ ಟ್ಯೂನಿಂಗ್ ಇದ್ದಂತೆ. ರೇಡಿಯೋ ಸಂಕೇತಗಳನ್ನು ಟ್ಯೂನ್ ಮಾಡಿಕೊಂಡು ಬೇಕಾದ ಸಂಗೀತವನ್ನು ಕೇಳುವುದಿಲ್ಲವೆ? ಹಾಗೆ. ದೇಹವೇ ರೇಡಿಯೋ ಆದರೆ, ಮನಸ್ಸು ಟ್ಯೂನರ್. ಸುತ್ತಲೂ ಚದುರಿರುವ ಆಲೋಚನೆಗಳ ತರಂಗಗಳನ್ನು ಟ್ಯೂನ್ ಮಾಡಿ ಒಳಗೆಳೆದುಕೊಳ್ಲಬಹುದು. ಮನಸ್ಸು ಶೂನ್ಯಕ್ಕೆ ಹತ್ತಿರ ಹೋದಷ್ಟೂ ನಮ್ಮಲ್ಲಿ ಹುಟ್ಟುವ ಆಲೋಚನೆಗಳು ಘನವಾಗುತ್ತ ಸಾಗುತ್ತವೆ. ನಮ್ಮ ಸನಾತನ ಧರ್ಮದ ಉಗಮದ ಕಲ್ಪನೆ ಹೀಗೇ. ಸೃಷ್ಟಿಯ ಆದಿಯಲ್ಲಿ ಹುಟ್ಟಿಕೊಂಡ ಶಬ್ದವನ್ನು ಋಷಿಗಳು ಹೀಗೇ ಗ್ರಹಿಸಿದ್ದು. ವೇದಗಳ ಗ್ರಹಿಕೆಯ ಮಾರ್ಗವೂ ಇದೇ ಎನ್ನಲಾಗುತ್ತದೆ. ಹೀಗೆ ತನ್ನರಿವು ಕಳೆದುಕೊಂಡ ಮೇಲೆ ದರ್ಶನ ಪಡಕೊಂಡ ಶ್ರೇಷ್ಠ ವಿಚಾರಗಳಾದ್ದರಿಂದ ವೇದಗಳ ಮಾತು ಇಂದಿಗೂ ಸತ್ಯವಾಗಿವೆ. ಹೀಗೆ ಯಾವ ಮತವು ಶಾಶ್ವತ
ಸತ್ಯವನ್ನು ಪ್ರತಿಪಾದಿಸುವುದೋ ಅದು ‘ಧರ್ಮ’ವಾಗುತ್ತದೆ ಮತ್ತು ವಿಶ್ವಗುರು ಯೋಗ್ಯತೆ ಪಡೆದುಕೊಳ್ಳುತ್ತದೆ.

ಈಗ ಒಂದು ಪುಟ್ಟ ಪ್ರಯೋಗ ಮಾಡಿ. ಕಣ್ಮುಚ್ಚಿ ಕುಳಿತುಕೊಳ್ಳಿ. ನಿಮ್ಮ ಪ್ರಯತ್ನವೇ ಇಲ್ಲದೆ ಹುಟ್ಟುವ ಆಲೋಚನೆಯ ತರಂಗಗಳನ್ನು ಗಮನಿಸಿ. ಅವು ಸಾಗುವ ಹಾದಿಯ ಅವಲೋಕನ ಮಾಡಿ. ನೀವು ಅವುಗಖನ್ನು ತಡೆಯಲು ಪ್ರಯತ್ನಿಸಿದಷ್ಟೂ ಅವು ಹೆಚ್ಚುಹೆಚ್ಚು ಗೊಂದಲ ಎಬ್ಬಿಸುವುದನ್ನು ಕಾಣುವಿರಿ. ಅಷ್ಟೇ ಅಲ್ಲ, ಒಂದು ಆಲೋಚನೆ ಮತ್ತೊಂದಕ್ಕೆ ಬೆಸೆದುಕೊಳ್ಳುತ್ತಾ ಇದು ಸರಪಳಿಯಾಗುವುದು ನಿಮ್ಮ ಅನುಭವಕ್ಕೆ ಬರುತ್ತದೆ. ಈಗ ಸ್ವಲ್ಪ ಹೊತ್ತಿನ ಬಳಿಕ ಇದು ಹುಟ್ಟುತ್ತಿರುವುದು ಎಲ್ಲಿ ಎಂದು ಹುಡುಕಾಟ ಶುರು ಮಾಡಿ. ಈಗ ಮನಸ್ಸನ್ನು ದಾಟಿ ಹೋಗುವ ಪ್ರಯತ್ನ ಶುರುವಾಗುತ್ತದೆ. ನೀವು ಏಕಾಗ್ರರಾಗಲು
ಸಾಧ್ಯವಾದಷ್ಟೂ ವಿಶ್ವಚಿತ್ತ ನಿಮ್ಮೆದುರು ತೆರೆದುಕೊಳ್ಳುತ್ತದೆ. ನೀವು ಅವಾಕ್ಕಾಗೋದು ಖಚಿತ.
ಊಹೂಂ.. ಈ ಎಲ್ಲ ಪ್ರಯೋಗಗಳಿಗೂ ನೀವೇ ಪ್ರಯೋಗಾಲಯ. ನಿಮಗಾಘುವ ಬಗೆಬಗೆಯ ಅನುಭೂತಿಯನ್ನು ನೀವು ಯಾರಿಗೂ ವಿವರಿಸಲಾರಿರಿ. ಈ ಕಾರಣಕ್ಕೆ ಇದು ಸುಳ್ಳೆಂದು ನೀವು ವಾದಿಸುವುದೂ ಆಗದು. ವಿಜ್ಞಾನಕ್ಕೆ ಇವುಗಳನ್ನು ಸಾಧಿಸುವುದು ಸಾಧ್ಯವಾಗದು. ಜಗತ್ತಿನ ಸೂಕ್ಷ್ಮ ಮನಸ್ಸಿನ ವಿಜ್ಞಾನಿಗಳನೇಕರು ಇಂದು ಇದಕ್ಕಾಗಿ ತಿಣುಕಾಡುತ್ತಿದ್ದಾರೆ. ನರವಿಜ್ಞಾನವಂತೂ ಭಾರತೀಯ ಚಿಂತನೆಗಳತ್ತ ವಾಲಿಬಿಟ್ಟಿದೆ. ಅದರ ಆಧಾರದ ಮೇಲೆ ಪೂರ್ಣ
ಜಗತ್ತು ಭಾರತಕ್ಕೆ ನತಮಸ್ತಕವಾಗುವ ದಿನ ದೂರವಿಲ್ಲ.

Comments