ಸಂಜೆ ನಡಿಗೆನಡೆಯುವುದು ಸಾಮಾನ್ಯ ನಾನೂ ಹಾಗೇನೇ 
ಸಂಜೆ ಮಬ್ಬಿಗೆ...  ಒಮ್ಮೊಮ್ಮೆ  ಕಡಲತಡಿಯ ಮರಳಿನ ಹಾದಿ ಹಿಡಿದು....
ಸಹಜವಾಗಿಯೇ ನಿಮಗೆ ಅಚ್ಚರಿಯಾದೀತು....
ನಿಮ್ಮ
ಅನುಭವಕ್ಕೆ ನಿಲುಕದ ಎಷ್ಟೋ ಯೋಚನೆಗಳ ಕಟ್ಟುವ ಕೆಲಸ.....ಹಾದಿಯುದ್ದಕ್ಕೂ....
ಆ ಕ್ಷಣ
ಕಡಲಾಳ ಒಡಲಾಳ ಎರಡೂ ಒಂದೇ ತೆರ....
ಈಜುವ ಛಲ ಎರಡರೊಳಗಿಳಿದು....
ಮೌನವಾಗಿ ನಗುತ್ತೇನೆ ....
ಅಲ್ಲೇ ಅಲೆಯ ಮೇಲೆ ತೇಲಿ ಬಂದೊಂದು
ನಕ್ಷತ್ರ ಮೀನಿಗೂ ನನ್ನ ನಗು ಇಷ್ಟವಾಗಿರಬೇಕು...
ಪುಟಪುಟನೆ ಖುಷಿಯಿಂದ ಎಗರುವುದ ನೋಡುತ್ತಾ ಕಳೆದು ಹೋಗುತ್ತೇನೆ...
ಕಡಲ ತೀರದ ತುಂಬಾ
ನಿನ್ನೆ ನಡೆದ ಹಾದಿಯ ಹೆಜ್ಜೆ ಗುರುತುಗಳು ಹಾಗೇ ಇವೆ....
ಹತ್ತಾರು ಮರಳಕಣಗಳು ಸವೆದು ಹೋಗಿರಬಹುದು ಅಷ್ಟೆ....
ಭಾವುಕನಾಗುತ್ತೇನೆ......
ಇಂದಿನತನಕ ಯಾವ ಅಲೆಗಳಿಗೂ ನನ್ನ ಹೆಜ್ಜೆಗಳ ಗುರುತು ಅಳಿಸುವ ಶಕ್ತಿ ಇದ್ದಿರಲಿಲ್ಲ......ಮುಂದೊಂದು ದಿನ ಬರಬಹುದೇನೋ....
ಬರಲೇಬೇಕು...
ಅದೇ ಕಡಲು ಅದೇ ಹಾದಿ...
ಅದೇ ಭೋರ್ಗರೆತ.... ಅವೇ ಅಲೆಗಳ ಅಬ್ಬರ.....
ಇಷ್ಟಾಗಿಯೂ  ಅಂದುಕೊಳ್ಳುತ್ತೇನೆ .....
ನನ್ನ ಹೆಜ್ಜೆಗಳನ್ನು ಅನುಸರಿಸಿ ಬದುಕುವ ಮಂದಿ ಬಂದಾರು......
ಕುಳಿತು ಕಾಯುತ್ತಿರುತ್ತೇನೆ...
ವಿಶ್ರಾಂತಿ ಎಲ್ಲಿಂದ ಸಿಗಬೇಕು.....
ಯೋಚನೆಗಳ ಸರಪಣಿಯೊಳಗೆ
ಬಂಧಗಳು ಬಂಧಿಯಾಗಿವೆ....
ಮೌನ ಉಳಿಯುತ್ತದೆ ಕವಿತೆಯಲ್ಲಿ .....
ಮತ್ತೆ ಎಚ್ಚೆತ್ತು... ನಡೆಯುತ್ತೇನೆ...
ಅದೇ ಉಸುಕಿನ ಜೊತೆ ಮುಸುಕಿನ...
ಗುದ್ದಾಟ....
. ಮತ್ತೊಮ್ಮೆ
ಅದೇ ಮಬ್ಬಿನೊಳಗೆ.... ಸೇರಿ ....
ಹಾಗೆ ಮೌನವಾಗಿ ಮತ್ತೆ ನಗುತ್ತೇನೆ....
              ರಚನೆ: ಶ್ರೀಕೃಷ್ಣ ಸಿ ಯನ್ ಚೇರ್ಕೂಡ್ಲು ಮಂಗಳೂರು

Comments